ಚಂದನವನದಲ್ಲಿ ಮುಂದುವರೆದ ದಾಸ ಪರಂಪರೆ; ಜಗನ್ನಾಥ ದಾಸರ ನಂತರ ವೆಂಕಟದಾಸರ ಕುರಿತ ಚಿತ್ರ

Sri Prasanna Venkatadasaru 1
Published on

ಬೆಂಗಳೂರು: ಈ ಹಿಂದೆ 'ಶ್ರೀ ಜಗನ್ನಾಥ ದಾಸರು' ಚಿತ್ರವನ್ನು ನಿರ್ದೇಶಿಸಿದ್ದ ಮಧುಸೂದನ ಹವಾಲ್ದಾರ್​, ಈಗ ಸದ್ದಿಲ್ಲದೆ 'ಶ್ರೀ ಪ್ರಸನ್ನ ವೆಂಕಟದಾಸರು' ಎಂಬ ಇನ್ನೊಂದು ಚಿತ್ರ ಮಾಡಿದ್ದಾರೆ. ಈ ಮೂಲಕ ಮತ್ತೊಬ್ಬ ದಾಸ ಶ್ರೇಷ್ಠರ ಜೀವನ ಮತ್ತು ಸಾಧನೆಯನ್ನು ಜನರಿಗೆ ಪರಿಚಯಿಸುವುದಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ, 'ಶ್ರೀ ಪ್ರಸನ್ನ ವೆಂಕಟದಾಸರು' ಚಿತ್ರದ ಹಾಡುಗಳು ಮತ್ತು ಟೀಸರ್​ ಬಿಡುಗಡೆಯಾಗಿದೆ. ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು, ಚಿತ್ರದ ಹಾಡುಗಳು ಮತ್ತು ಟೀಸರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಕುರಿತು ಮಾತನಾಡಿರುವ ಮಧುಸೂದನ್​ ಹವಾಲ್ದಾರ್​, ' ಈ ಹಿಂದೆ 'ಶ್ರೀ ಜಗನ್ನಾಥ ದಾಸರು' ಚಿತ್ರವನ್ನು ನಿರ್ಮಿಸಿದ್ದ ನಮ್ಮ ತಂಡ ಇದೀಗ ಮತ್ತೋರ್ವ ದಾಸ ಶ್ರೇಷ್ಠರಾದ ಶ್ರೀ ಪ್ರಸನ್ನ ವೆಂಕಟ ದಾಸರ ಜೀವನವನ್ನು ತೆರೆ ಮೇಲೆ ತರುತ್ತಿದ್ದೇವೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ' ಎನ್ನುತ್ತಾರೆ. ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ಅವರು ನಿರ್ಮಾಣವನ್ನೂ ಮಾಡಿದ್ದಾರೆ.

ಪ್ರಸನ್ನ ವೆಂಕಟದಾಸರ ಪಾತ್ರಧಾರಿ ಪ್ರಭಂಜನ್ ದೇಶಪಾಂಡೆ ಮಾತನಾಡಿ, 'ದಾಸ ಪರಂಪರೆಯಲ್ಲಿ ಪುರಂದರದಾಸರು, ಕನಕದಾಸರು ಇವರುಗಳ ಕುರಿತು ಚಿತ್ರ ಆಗಿದೆ. ಆದರೆ, ಇನ್ನೂ ಸಾಕಷ್ಟು ದಾಸ ಶ್ರೇಷ್ಠರು ಇದ್ದಾರೆ. ಅವರಲ್ಲಿ ಶ್ರೀ ಪ್ರಸನ್ನ ವೆಂಕಟದಾಸರು ಸಹ ಒಬ್ಬರು. ದಾಸರಿಗೆ ಸ್ವತಃ ಶ್ರೀನಿವಾಸ ದೇವರೇ ಬಂದು ನಾಲಿಗೆ ಮೇಲೆ ಬೀಜಾಕ್ಷರಗಳನ್ನು ಬರೆದಿದ್ದರು. ಅವರ ಜೀವನದ ಪ್ರತಿಯೊಂದು ಅಮೂಲ್ಯ ಘಟನೆಯನ್ನು ಇಲ್ಲಿ ತೋರಿಸಿದ್ದೇವೆ. ಚಿತ್ರಕ್ಕಾಗಿ ನಾನು ದೈಹಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಇದು ಕೇವಲ ಕಥೆಯಲ್ಲ ಒಂದು ಭಕ್ತಿ ಕಥೆ. ದಾಸರ ಸರಣಿ ಚಿತ್ರಗಳನ್ನು ಮಾಡುವುದು ನಮ್ಮ ಯೋಜನೆಯಾಗಿದ್ದು ಇದು ಎರಡನೇ ಚಿತ್ರ. ಮುಂದಿನ ದಿನಗಳಲ್ಲಿ ಮತ್ತೊಬ್ಬ ದಾಸರ ಚಿತ್ರವನ್ನು ತರಲಿದ್ದೇವೆ. ಈ ಚಿತ್ರ ಮಾಡಿದ್ದು ನನ್ನ ಪುಣ್ಯ' ಎಂದರು.

'ಶ್ರೀ ಪ್ರಸನ್ನ ವೆಂಕಟದಾಸರು' ಚಿತ್ರದಲ್ಲಿ ಒಟ್ಟು 10 ಹಾಡುಗಳಿದ್ದು, ದಾಸರ ಪದ್ಯಗಳನ್ನೇ ಬಳಸಲಾಗಿದೆಯಂತೆ. ಮೂಲ ಸಂಗೀತ ರಚನೆಗೆ ಚ್ಯುತಿ ಬರದಂತೆ ಟ್ಯೂನ್​ಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದ್ದು, ಅನಂತ್ ಕುಲಕರ್ಣಿ, ರಾಯಚೂರು ಶೇಷಗಿರಿ ದಾಸ್ ಮುಂತಾದವರು ಚಿತ್ರದಲ್ಲಿ ಹಾಡಿದ್ದಾರೆ. ರಾಯಚೂರು, ಹಂಪಿ, ಆನೆಗುಂದಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿರುವ ಈ ಚಿತ್ರಕ್ಕೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಮಾತಾಂಬುಜಾ ಮೂವೀಸ್​ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪ್ರಭಂಜನ್ ದೇಶಪಾಂಡೆ, ವಿಜಯಾನಂದ ನಾಯ್ಕ, ವಿಷ್ಣು ಜೋಶಿ, ಲಕ್ಷ್ಮೀ, ಸ್ವಾಮಿ ರಾವ್ ದೇಸಾಯಿ, ಶರತ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net