

ಬೆಂಗಳೂರು: ವಿಜಯ್ ರಾಘವೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬಿಜಿಯಾಗಿದ್ದಾರೆ. ಅಂಥದ್ದೊಂದು ಚಿತ್ರ ಇದೀಗ ಮುಕ್ತಾಯವಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದೇ 'ಓ ಮನಸೇ'. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ಈ ಅಮೂಲ್ಯವಾದ ವಜ್ರವನ್ನು ಆತ್ಮಗಳು ಕಾಯುತ್ತವಂತೆ …
ತ್ರಿಕೋನ ಪ್ರೇಮಕಥೆಯೆಂದರೆ, ಇಲ್ಲಿ ಇನ್ನೊಬ್ಬ ಹೀರೋ ಅಥವಾ ಹೀರೋಯಿನ್ ಇರಬೇಕು. ಇದು ಇಬ್ಬರು ಯುವಕರು ಮತ್ತು ಒಬ್ಬ ಯುವತಿಯ ಸುತ್ತ ಸಾಗುವ ಚಿತ್ರ. ಇಲ್ಲಿ ಇನ್ನೊಬ್ಬ ನಾಯಕನಾಗಿ ಧರ್ಮ ಕೀರ್ತಿರಾಜ್ ನಟಿಸಿದ್ದು, ನಾಯಕಿಯಾಗಿ ಸಂಚಿತಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಉಮೇಶ್ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
'ಓ ಮನಸೇ' ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡುವ ವಿಜಯ್ ರಾಘವೇಂದ್ರ, 'ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಕರೊನಾ ಸಮಯದಲ್ಲಿ ಬಿಡುವಿದ್ದಾಗ, ನಿರ್ದೇಶಕರು ಬಂದು ಈ ಚಿತ್ರದ ಕಥೆ ಹೇಳಿದರು. ಇದೊಂಥರಾ ಲಕ್ಕಿ ಚಿತ್ರ ನನಗೆ. ಈ ಚಿತ್ರ ಒಪ್ಪಿದ ನಂತರ ಸಾಲುಸಾಲು ಚಿತ್ರಗಳಲ್ಲಿ ನಾನು ನಟಿಸಿದೆ' ಎನ್ನುತ್ತಾರೆ.
ಕೊರೋನ ಸಮಯದಲ್ಲಿ ಅವಕಾಶಗಳು ಕಡಿಮೆ ಇದ್ದಂತಹ ಸಮಯದಲ್ಲಿ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. 'ನಿರ್ಮಾಪಕರು ಅಡ್ವಾನ್ಸ್ ಕೊಟ್ಟ ಘಳಿಗೆ ಚೆನ್ನಾಗಿದೆ. ಆನಂತರ ಸಾಕಷ್ಟು ಚಿತ್ರಗಳು ಬಂದವು. ಈ ಚಿತ್ರದ ಬಗ್ಗೆ ಹೇಳಬೇಕಾದರೆ, ನಾಯಕಿಯನ್ನು ನಾನು ಹಾಗೂ ವಿಜಯ ರಾಘವೇಂದ್ರ ಇಬ್ಬರೂ ಪ್ರೀತಿಸುತ್ತೇವೆ. ನಮ್ಮಿಬ್ಬರಲ್ಲಿ ಯಾರಿಗೆ ಸಿಗುತ್ತಾರೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು' ಎನ್ನುತ್ತಾರೆ ಧರ್ಮ ಕೀರ್ತಿರಾಜ್.
ಈ ಚಿತ್ರವನ್ನು ಎಂ.ಎನ್ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ, ಹರೀಶ್ ರಾಯ್, ಸಾಧು ಕೋಕಿಲ, ಶೋಭರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ತ್ರಿವೇಣಿ ರಾವ್ ಮುಂತಾದವರು ನಟಿಸಿದ್ದಾರೆ.