‘ಇರುವುದೆಲ್ಲವ ಬಿಟ್ಟು’ ಬಳಿಕ 'ಪದವಿಪೂರ್ವ'ಕ್ಕೆ ಅತಿಥಿಯಾದ ಶ್ರೀಮಹದೇವ್

Sri
Published on

ಬೆಂಗಳೂರು: ಇರುವುದೆಲ್ಲವ ಬಿಟ್ಟು ಗಜಾನನ ಗ್ಯಾಂಗ್ ಸೇರಿ ಹೊಂದಿಸಿ ಬರೆಯಲು ಆರಂಭಿಸಿದ್ದ ಶ್ರೀಮಹದೇವ್ ಇದೀಗ ಪದವಿಪೂರ್ವಕ್ಕೆ ಅತಿಥಿಯಾಗಿ ಸೇರಿದ್ದಾರೆ. ಅರ್ಥಾತ್​, ‘ಇರುವುದೆಲ್ಲವ ಬಿಟ್ಟು’ ಚಿತ್ರದ ನಂತರ ‘ಗಜಾನನ ಆ್ಯಂಡ್ ಗ್ಯಾಂಗ್’ ಹಾಗೂ ‘ಹೊಂದಿಸಿ ಬರೆಯಿರಿ’ ಚಿತ್ರಗಳಲ್ಲಿ ಬಿಜಿ ಆಗಿರುವ ಯುವ ನಟ ಈಗ ಪದವಿಪೂರ್ವ ಚಿತ್ರದಲ್ಲಿ ಅತಿಥಿಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲ್ಮ್ಸ್​ಜಂಟಿಯಾಗಿ ನಿರ್ಮಿಸಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ 'ಪದವಿಪೂರ್ವ' ಚಿತ್ರತಂಡವನ್ನು ಯುವ ನಟ-ನಟಿಯರು ಸಾಲು ಸಾಲಾಗಿ ಸೇರಿಕೊಳ್ಳುತ್ತಿದ್ದಾರೆ. ನಟಿ ದಿವ್ಯಾ ಉರುಡುಗ ಹಾಗೂ ಪ್ರಭು ಮುಂಡ್ಕೂರ್ ನಂತರ ಈಗ ಯುವ ನಟ ‘ಶ್ರೀ ಮಹದೇವ್’ ಕೂಡ ಭಟ್ಟರ ತಂಡಕ್ಕೆ ಸೇರಿಕೊಂಡಿದ್ದಾರೆ.

ಚಿತ್ರದ ಐದನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಇದೇ ಡಿ.13ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ ಎಂದು ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ತಿಳಿಸಿದ್ದಾರೆ.

ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. 'ಪದವಿಪೂರ್ವ' ಚಿತ್ರಕ್ಕಾಗಿ ಅರ್ಜುನ್ ಜನ್ಯ ಸಂಯೋಜಿಸಿರುವ ರಾಗಗಳಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದರೆ, ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಣ್ಚಳಕ ಹಾಗು ಮಧು ತುಂಬಕೆರೆಯ ಸಂಕಲನದ ಕೈಚಳಕ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net