

ಬೆಂಗಳೂರು: ಹಳೆಯ ಮನೆಯಲ್ಲಿ ದೆವ್ವದ ಕಾಟವಿರುವ ಹಲವು ಕಥೆಗಳು ಸಿನಿಮಾ ಆಗಿವೆ. ಜನ ಚೇಂಜ್ ಕೇಳುತ್ತಿರುವುದರಿಂದ, ಮನೆಯ ಬದಲು ಕಾಲೇಜಿನಲ್ಲಿ ದೆವ್ವದ ಕಾಟ ತೋರಿಸುವುದಕ್ಕೆ ಹೊರಟಿದ್ದಾರೆ ನವನಿರ್ದೇಶಕ ಭರತ್. ಅವರೀಗ ‘ಸ್ಪೂಕಿ ಕಾಲೇಜ್’ ಎಂಬ ಹೊಸ ಚಿತ್ರ ಮಾಡುತ್ತಿದ್ದು, ಹೆಸರೇ ಹೇಳುವಂತೆ, ಕಾಲೇಜೊಂದರಲ್ಲಿ ನಡೆಯುವ ಭಯಾನಕ ಕಥೆಯನ್ನು ಈ ಚಿತ್ರದಲ್ಲಿ ತೋರಿಸುವುದಕ್ಕೆ ಹೊರಟಿದ್ದಾರೆ.
‘ದಿಯಾ’ ಚಿತ್ರ ಜನಪ್ರಿಯತೆ ಪಡೆಯುವುದಕ್ಕೂ, ಲಾಕ್ಡೌನ್ ಶುರುವಾಗುವುದಕ್ಕೂ ಸರಿ ಹೋಯಿತು. ಬಹುಶಃ ಲಾಕ್ಡೌನ್ ಇಲ್ಲದಿದ್ದರೆ, ಆ ಚಿತ್ರದಲ್ಲಿ ನಟಿಸಿದ್ದ ಖುಷಿ ರವಿ ಇಷ್ಟರಲ್ಲಿ ಮಿನಿಮಮ್ ಮೂರು ಚಿತ್ರಗಳಲ್ಲಿ ನಟಿಸಿರುತ್ತಿದ್ದರೇನೋ? ಆದರೆ, ಲಾಕ್ಡೌನ್ನಿಂದಾಗಿ ಖುಷಿ ಒಂದಿಷ್ಟು ಚಿತ್ರಗಳನ್ನು ಒಪ್ಪಿಕೊಂಡರೂ, ಯಾವ ಚಿತ್ರವೂ ಶುರುವಾಗಲಿಲ್ಲ.ಈಗ ಅವರು ‘ಸ್ಪೂಕಿ ಕಾಲೇಜ್’ ಮೂಲಕ ವಾಪಸ್ಸಾಗುತ್ತಿದ್ದಾರೆ.
ಈ ಚಿತ್ರಕ್ಕೆ ಖುಷಿ ನಾಯಕಿಯಾದರೆ, ವಿವೇಕ್ ಸಿಂಹ ಮತ್ತು ಪೃಥ್ವಿ ರಾಷ್ಟ್ರಕೂಟ ನಾಯಕರು. ಈ ಪೈಕಿ, ವಿವೇಕ್ ಸಿಂಹ ಇದಕ್ಕೂ ಮುನ್ನ ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ನಟಿಸಿದ್ದರು. ಜತೆಗೆ ಪ್ರಕಾಶ್ ಬೆಳವಾಡಿ, ಹನುಮಂತೇಗೌಡ, ರಘು ರಾಮನಕೊಪ್ಪ ಮುಂತಾದವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ಗಲ್ವಾನ್ ಕಣಿವೆ ವೀರರ ನೆನಪಿನ ಸ್ಮಾರಕ ನಿರ್ಮಿಸಿದೆ ಸೇನೆ
ಈ ಚಿತ್ರವನ್ನು ಭರತ್ ಜಿ ಎನ್ನುವವರು ನಿರ್ದೇಶನ ಮಾಡಲಿದ್ದು, ಅವರೇ ಕಥೆ-ಚಿತ್ರಕಥೆಯನ್ನು ರಚಿಸಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ಇನ್ನು ‘ರಂಗಿತರಂಗ’ ಚಿತ್ರವನ್ನು ನಿರ್ವಿುಸಿದ್ದ, ‘ಶ್ರೀಮನ್ನಾರಯಣ’ನ ಸಹ-ನಿರ್ವಪಕರಾಗಿದ್ದ ಎಚ್.ಕೆ. ಪ್ರಕಾಶ್ ಈ ಚಿತ್ರ ನಿರ್ವಿುಸುತ್ತಿದ್ದಾರೆ.
ನವೆಂಬರ್ ಮೊದಲ ವಾರದಿಂದ ಪ್ರಾರಂಭವಾಗಲಿರುವ ಈ ಚಿತ್ರಕ್ಕೆ ಧಾರವಾಡದ 103 ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ಚಿತ್ರೀಕರಣ ಮಾಡಲಾಗುತ್ತದಂತೆ. ಅಷ್ಟೇ ಅಲ್ಲ, ದಾಂಡೇಲಿಯ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆಯಲಿದೆ.