ಸಮುದ್ರದಡದಲ್ಲಿ ಒಂದು ಸಖತ್​ ಮನೆ ಮಾಡಿದ್ದಾರೆ ವಸಿಷ್ಠ ಸಿಂಹ …

Love Li 4
Published on

ಉಡುಪಿ: ವಸಿಷ್ಠ ಸಿಂಹ ಸಮುದ್ರದಡದಲ್ಲಿ ಒಂದು ಮನೆ ಮಾಡಿದ್ದಾರೆ. ಕೆಲವು ದಿನಗಳಿಂದ ಅವರು ಅದೇ ಮನೆಯಲ್ಲಿದ್ದಾರೆ. ಹರಿಪ್ರಿಯಾ ಜತೆಗೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವ ಅವರು. ಮುಂದೆ ಮದುವೆಯಾದ ಮೇಲೆ ಅದೇ ಮನೆಯಲ್ಲಿ ನೆಲೆಗೊಳ್ಳಬಹುದು ಅಂತ ನೀವಂದುಕೊಂಡಿದ್ದರೆ ಅದು ತಪ್ಪು.

ಇದು ವಸಿಷ್ಠ ಸಿಂಹ ಕಟ್ಟಿಸಿದ ಮನೆಯಲ್ಲ. ಅವರ 'ಲವ್​ ಲೀ' ಚಿತ್ರಕ್ಕೆ ಚಿತ್ರತಂಡದವರು ಹಾಕಿರುವ ಹೊಸ ಸೆಟ್​. ಈಗಾಗಲೇ ಬೆಂಗಳೂರಿನಲ್ಲಿ ಎರಡು ಹಂಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡದವರು, ಇದೀಗ ಮಲ್ಪೆಯ ಪಡುಕರೆಯಲ್ಲಿ ಚಿತ್ರಕ್ಕಾಗಿ ಕಡಲ ತೀರದಲ್ಲಿ ಮನೆ ಸೆಟ್​ ಹಾಕಿ ಚಿತ್ರೀಕರಣ ಮಾಡುತ್ತಿದೆ. ಕಳೆದ 10 ದಿನಗಳಿಂದ ಇಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಹರಿಪ್ರಿಯಾ ಸಹ ಕಳೆದ ವಾರ ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟು ಚಿತ್ರತಂಡದವರಿಗೆ ಶುಭ ಹಾರೈಸಿ ಹೋಗಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ವಸಿಷ್ಠ ಸಿಂಹ, 'ಇದೊಂದು ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಸಹ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದ್ದೇವೆ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ನಡೆಯುತ್ತಿದೆ. ಈ ಸಿನಿಮಾ ಸಿನಿಪ್ರಿಯರ ಮನಸ್ಸು ಗೆಲ್ಲುವ ನಂಬಿಕೆ ಇದೆ' ಎಂದು ಹೇಳಿದ್ದಾರೆ.

ನಿರ್ದೇಶಕ ಚೇತನ್ ಕೇಶವ್ ಮಾತನಾಡಿ, 'ಇನ್ನು ಏಳು ದಿನಗಳ ಚಿತ್ರೀಕರಣ ಮುಗಿದರೆ, ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಲಂಡನ್​ನಲ್ಲೂ ಚಿತ್ರೀಕರಣ ಮಾಡಬೇಕಿದೆ. ಜನವರಿ ಮೊದಲ ವಾರದಲ್ಲಿ ಚಿತ್ರತಂಡ ಲಂಡನ್​ಗೆ ತೆರಳಲಿದೆ' ಎಂದು ಸಿನಿಮಾ ಬಗ್ಗೆ ಮಾಹಿತಿ ಕೊಡುತ್ತಾರೆ.

‘ಲವ್ ಲಿ’ ಚಿತ್ರದಲ್ಲಿ ವಸಿಷ್ಠಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. 'ಸುಬ್ಬಲಕ್ಷ್ಮಿ ಸಂಸಾರ' ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ರೋಲ್ ನಲ್ಲಿ ಮಿಂಚಲಿದ್ದಾರೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧು ಕೋಕಿಲ, ದತ್ತಣ್ಣ, ಮಾಳವಿಕಾ, ಶೋಭರಾಜ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ರವೀಂದ್ರ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಶ್ವಿನ್​ ಕೆನಡಿ ಛಾಯಾಗ್ರಹಣ, ಅನೂಪ್​ ಸೀಳಿನ್​ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net