ಸಂಘರ್ಷ ಸಂಗೀತ ಸಂಭ್ರಮ: ಸ್ಟಾರ್ ಸುವರ್ಣದಲ್ಲಿ ಇಂದು ಸಂಜೆ ವಿಶೇಷ ಕಾರ್ಯಕ್ರಮ

Star Suvarna
Published on

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ, ಹೆಸರಾಂತ ನಿರ್ವಪಕಿ ಶ್ರುತಿ ನಾಯ್ಡು ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಸಂಘರ್ಷ’ ಧಾರಾವಾಹಿಯು ಪ್ರತಿ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದ್ದು, ಈಗಾಗಲೇ 300 ಕಂತುಗಳನ್ನು ಪೂರೈಸಿದೆ. ಇದೀಗ ನಾಯಕ ರಾಜಾ ಹಾಗೂ ನಾಯಕಿ ಇಂದಿರಾರವರ ಮದುವೆಯ ಸಂಗೀತ ಕಾರ್ಯಕ್ರಮವನ್ನು ತುಂಬಾ ಅದ್ಧೂರಿಯಾಗಿ ಮಾಡಲಾಗುತ್ತಿದೆ. ‘ಸಂಘರ್ಷ ಸಂಗೀತ ಸಂಭ್ರಮ’ ಎಂಬ ಶೀರ್ಷಿಕೆಯಡಿ ಈ ಕಂತುಗಳು ಪ್ರಸಾರವಾಗಲಿವೆ.

ಕುತೂಹಲಭರಿತವಾದ ಕಥಾಹಂದರ, ಗ್ರಾಮೀಣ ಶೈಲಿಯ ನಿರೂಪಣೆ ಮತ್ತು ಕಲಾವಿದರ ನೈಜ ನಟನೆಯಿಂದ ‘ಸಂಘರ್ಷ’ ಧಾರಾವಾಹಿಯು ಕರ್ನಾಟಕದಾದ್ಯಂತ ಜನಮನ್ನಣೆಯನ್ನು ಗಳಿಸಿ, ಯಶಸ್ವಿಯಾಗಿ ಮುನ್ನುಗ್ಗುವ ಮೂಲಕ ತನ್ನ ಅಭಿಮಾನಿ ಬಳಗವನ್ನು ವೃಧಿ್ಧಕೊಳ್ಳತ್ತಿದೆ. ಇಂದಿರಾ ಹಾಗೂ ರಾಜಾ ಅವರ ಪ್ರೇಮ ಈಗ ಮದುವೆಯ ಹಂತಕ್ಕೆ ಬಂದಿದೆ. ಆ ಮದುವೆಯ ಭಾಗವಾದ ಸಂಗೀತ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಲಾಗಿದೆ. ಇತ್ತೀಚೆಗಷ್ಟೇ ಅದರ ಚಿತ್ರೀಕರಣವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಧಾರಾವಾಹಿ ತಂಡ ಮಾಡಿಮುಗಿಸಿದೆ. ಈ ಸಂಘರ್ಷ ಸಂಗೀತ ಸಂಭ್ರಮದಲ್ಲಿ ಇದೇ ವಾಹಿನಿಯ ‘ಮುದ್ದುಲಕ್ಷ್ಮಿ’, ‘ಆಕಾಶದೀಪ’, ‘ಮನಸೆಲ್ಲಾ ನೀನೆ’ ಹಾಗೂ ‘ಸರಸು’ ಧಾರಾವಾಹಿಯ ಜೋಡಿಗಳು ಪಾಲ್ಗೊಂಡಿದ್ದು, ಎಲ್ಲರೂ ಹಾಡಿ-ಕುಣಿದು ಸಂಭ್ರಮಿಸಿದ್ದಾರೆ.

ನಿರಂಜನ್ ದೇಶಪಾಂಡೆ ಹಾಗೂ ಚೈತ್ರ ವಾಸುದೇವನ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ವಿಶೇಷ ಅತಿಥಿಯಾಗಿ ಕನ್ನಡದ ಹೆಸರಾಂತ ಗಾಯಕಿ ಅನುರಾಧ ಭಟ್​ರವರು ಭಾಗವಹಿಸಿದ್ದಾರೆ. ಶ್ರುತಿ ನಾಯ್ಡು ಚಿತ್ರ ನಿರ್ಮಾಣ ಸಂಸ್ಥೆಯಡಿ ನಿರ್ವಣವಾಗುತ್ತಿರುವ ಈ ಧಾರಾವಾಹಿಯನ್ನು ರಮೇಶ್ ಇಂದಿರಾ ನಿರ್ದೇಶಿಸುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ವನಿತಾ ವಾಸು, ವಿಕ್ರಮ್ ಉದಯಕುಮಾರ್, ಸುಂದರ್, ತೇಜಸ್ವಿನಿ, ರೋಹಿತ್, ರೂಪ ಪ್ರಭಾಕರ್, ಸುನಿಲ್, ರಾಧಾ ಜಯರಾಂ, ವಿರಾಟ್, ಲಾವಣ್ಯ ಪ್ರತಿಭಾ ಮುಂತಾದವರು ನಟಿಸಿದ್ದಾರೆ. ಇಂದು ಸಂಜೆ 5.30 ರಿಂದ 8.30 ರವರೆಗೆ ಈ ವಿಶೇಷ ಕಂತು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net