

ಬೆಂಗಳೂರು: ಕೆಲವು ತಿಂಗಳಿನಿಂದ ದಕ್ಷಿಣ ಭಾರತ ಚಿತ್ರರಂಗ ವರ್ಸಸ್ ಬಾಲಿವುಡ್ ಚರ್ಚೆ ವಾರಕ್ಕೊಮ್ಮೆ ಹೊಸ ಚಿತ್ರಗಳು ಬಿಡುಗಡೆಯಾದಂತೆಲ್ಲ ಮುನ್ನಲೆಗೆ ಬರುತ್ತಲೇ ಇದೆ.
ಈ ವಾರವೂ ದಕ್ಷಿಣದ ಚಿತ್ರಗಳ ಪಾರಮ್ಯ ದೇಶ ವಿದೇಶಗಳಲ್ಲಿ ಮುಂದುವರಿದಿದ್ದು, ಬಾಲಿವುಡ್ ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದೆ. ಕಳೆದ ಶುಕ್ರವಾರ ಬಿಡುಗಡೆಯಾದ ಹಿಂದಿ ಚಿತ್ರ "ವಿಕ್ರಮ್ ವೇದ' ಎರಡು ದಿನಗಳಲ್ಲಿ 40 ಕೋಟಿ ರೂ. ಗಳಿಕೆ ಮಾಡಿದ್ದರೆ, ಮೊದಲ ದಿನವೇ 80 ಕೋಟಿ ರೂ. ಗಳಿಕೆ ಮಾಡಿದ್ದ ಮಣಿರತ್ನಂ ನಿರ್ದೇಶನದ "ಪಿಎಸ್ 1' ಎರಡು ದಿನಗಳಲ್ಲಿ ಬರೋಬ್ಬರಿ 150 ಕೋಟಿ ರೂ. ಕಲೆಕ್ಷನ್ ಮಾಡಿಕೊಂಡಿದೆ.
ಮತ್ತೊಂದೆಡೆ ಕನ್ನಡದ "ಕಾಂತಾರ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತೆಲುಗು ನಟ ಪ್ರಭಾಸ್ ಸೇರಿದಂತೆ ಪರಭಾಷಾ ಸೆಲೆಬ್ರಿಟಿಗಳೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.