

ಮುಂಬೈ: ಲಾಕ್ಡೌನ್ನಿಂದಾಗಿ ಚಿತ್ರಗಳು ಬಿಡಗುಡೆಯಾಗದೆ, ದೊಡ್ಡದೊಡ್ಡ ಚಿತ್ರಗಳೆಲ್ಲಾ ಓಟಿಟಿ ಪಾಲಾಗುತ್ತಿದ್ದ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಮತ್ತು ರಣವೀರ್ ಸಿಂಗ್ ಅಭಿನಯದ '83' ಚಿತ್ರಗಳನ್ನು ನಿರ್ಮಿಸಿದ್ದ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಮಾತ್ರ, ಯಾವುದೇ ಕಾರಣಕ್ಕೂ ಆ ಎರಡೂ ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಚಿತ್ರ ಪ್ರದರ್ಶನ ಪ್ರಾರಂಭವಾಗುವುದು ಅಕ್ಟೋಬರ್ ಆದರೂ ಪರವಾಗಿಲ್ಲ, ನವೆಂಬರ್ನಲ್ಲಿ ದೀಪಾವಳಿ ಹೊತ್ತಿಗೆ 'ಸೂರ್ಯವಂಶಿ' ಮತ್ತು ಕ್ರಿಸ್ಮಸ್ ಸಮಯದಲ್ಲಿ '83' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು.
ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ, ಎರಡೂ ಚಿತ್ರಗಳು ನಿಗದಿತ ಸಮಯದಲ್ಲಿ ಬಿಡುಗಡೆಯಾಗುವುದು ಸಂಶಯ ಎಂದು ಹೇಳಲಾಗುತ್ತಿದೆ. ಎರಡೂ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಲಿದ್ದು, ಒಂದರ ಬಿಡುಗಡೆ ವರ್ಷದ ಕೊನೆಗಾದರೆ, ಇನ್ನೊಂದರ ಬಿಡುಗಡೆ ಮುಂದಿನ ವರ್ಷವಾಗುವ ಸಾಧ್ಯತೆ ಹೆಚ್ಚಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಿಇಓ ಶಿಭಾಶಿಷ್ ಸರ್ಕಾರ್, 'ದೀಪಾವಳಿ ಸಂದರ್ಭದಲ್ಲಿ ಯಾವುದೇ ಚಿತ್ರ ಬಿಡುಗಡೆ ಮಾಡದಿರುವುದಕ್ಕೆ ನಿರ್ಧರಿಸಿದ್ದೇವೆ. ಅದಕ್ಕೆ ಕಾರಣವೂ ಇದೆ. ಅಕ್ಟೋಬರ್ 15ರಿಂದ ಚಿತ್ರ ಪ್ರದರ್ಶನ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ನವೆಂಬರ್ 1ರವರೆಗೂ ಚಿತ್ರ ಪ್ರದರ್ಶನ ಶುರುವಾಗುವ ಹಾಗೆ ಕಾಣುತ್ತಿಲ್ಲ. ಒಂದು ಪಕ್ಷ ನವೆಂಬರ್ ಒಂದಕ್ಕೆ ಚಿತ್ರ ಪ್ರದರ್ಶನ ಶುರುವಾದರೂ, ದೀಪಾವಳಿ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದು ಕಷ್ಟ. ಏಕೆಂದರೆ, ನಮಗೆ ಸಿಗುವುದು 15 ದಿನ ಮಾತ್ರ. ಈ 15 ದಿನಗಳಲ್ಲಿ ಪ್ರಮೋಷನ್ ಮಾಡಿ, ಬಿಡುಗಡೆ ಮಾಡುವುದು ಸುಲಭವಲ್ಲ' ಎಂದು ಹೇಳಿದ್ದಾರೆ.
ಹಾಗಾದರೆ, ಎರಡೂ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗುತ್ತವಾ ಎಂಬ ಪ್ರಶ್ನೆಗೆ, ''ಸೂರ್ಯವಂಶಿ' ಮತ್ತು '83' ಚಿತ್ರಗಳಲ್ಲಿ ಎರಡನ್ನೂ ಮುಂದೂಡುತ್ತೇವಾ ಅಥವಾ ಯಾವುದಾದರೂ ಒಂದು ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತೇವಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಾರೆ, ಡಿಸೆಂಬರ್ನಿಂದ ಮಾರ್ಚ್ ಒಳಗೆ, ಈ ಎರಡೂ ಚಿತ್ರಗಳನ್ನು ಬಿಡುಗಡೆ ಮಾಡುವುದು ನಮ್ಮ ಉದ್ದೇಶ' ಎಂದು ಅವರು ಹೇಳಿಕೊಂಡಿದ್ದಾರೆ.
ಅಲ್ಲಿಗೆ, ದೀಪಾವಳಿ ಸಂದರ್ಭದಲ್ಲಿ 'ಸೂರ್ಯವಂಶಿ' ಚಿತ್ರವನ್ನು ನೋಡಬಹುದು ಎಂದು ಕಾದಿದ್ದವರಿಗೆ ನಿರಾಶೆಯಾಗಿರುವುದಂತೂ ನಿಜ.