

ಮುಂಬೈ: ಪಾಯಲ್ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ ಸಮಯದಲ್ಲಿ ತಾವು ಭಾರತದಲ್ಲೇ ಇರಲಿಲ್ಲ, ಶ್ರೀಲಂಕಾದಲ್ಲಿ ಶೂಟಿಂಗ್ ಮಾಡುತ್ತಿದ್ದೆ ಎಂದು ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿರುವುದು, ಅಪ್ಪಟ ಸುಳ್ಳು ಎಂದು ನಟಿ ಪಾಯಲ್ ಘೋಶ್ ಹೇಳಿದ್ದಾರೆ. ಅನುರಾಗ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ, ನಿಜ ತನ್ನಿಂತಾನೇ ಹೊರಬರುತ್ತದೆ ಎಂಬುದನ್ನು ಸಹ ಅವರು ಹೇಳಿದ್ದಾರೆ.
2013ರಲ್ಲಿ ಅನುರಾಗ್ ಕಶ್ಯಪ್ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್ ಸ್ಟೇಶನ್ನಲ್ಲಿ ದೂರು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್ ವಿಚಾರಣೆ ಮಾಡಿಲ್ಲ ಎಂದು ಬೇಸರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಅನುರಾಗ್ ವಿರುದ್ಧ ಸೂಕ್ತ ಆ್ಯಕ್ಷನ್ ತೆಗೆದುಕೊಳ್ಳಿದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಸಿದ್ದರು.
ಅದಕ್ಕೆ ಸರಿಯಾಗಿ, ಮುಂಬೈ ಪೊಲೀಸರು ಅನುರಾಗ್ಗೆ ಸಮನ್ಸ್ ನೀಡಿ ಗುರುವಾರ ಕರೆಸಿಕೊಂಡಿದ್ದರು. ಸುಮಾರು ಎಂಟು ತಾಸುಗಳ ಕಾಲ ಗ್ರಿಲ್ ಮಾಡಿದ್ದರು. ಈ ಸಂದರ್ಭದಲ್ಲಿ, ಪಾಯಲ್ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ ಸಮಯದಲ್ಲಿ ತಾವು ಭಾರತದಲ್ಲೇ ಇರಲಿಲ್ಲ, ಶ್ರೀಲಂಕಾದಲ್ಲಿ ಶೂಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದರು.
ಇದರ ವಿರುದ್ಧ ಪಾಯಲ್ ಇನ್ನೊಂದು ಅರ್ಜಿ ಹಾಕುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಅದರ ಪ್ರಕಾರ, ಅನುರಾಗ್ ಕಶ್ಯಪ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಈ ಅರ್ಜಿಯಲ್ಲಿ ಅವರು ಬರೆದಿದ್ದು, ಮಂಪರು ಪರೀಕ್ಷೆ ಮಾಡಿದರೆ ನಿಜಾಂಶ ತನ್ನಿಂತಾನೇ ಬೆಳಕಿಗೆ ಬರುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.