ರಾಜಕಾರಣಿ ಮಕ್ಕಳನ್ನ, ಹೀರೋಗಳನ್ನ ಯಾಕೆ ಬಂಧಿಸ್ತಿಲ್ಲ? ಇಂದ್ರಜಿತ್​ ಪ್ರಶ್ನೆ

Indrajith-Lankesh-Final
Published on

ಬೆಂಗಳೂರು: ಡ್ರಗ್ಸ್​ ಮಾಫಿಯಾ ವಿಷಯವಾಗಿ ರಾಜಕಾರಣಿ ಮಕ್ಕಳು ಮತ್ತು ಕೆಲವು ಹೀರೋಗಳನ್ನು ಯಾಕೆ ಬಂಧಿಸುತ್ತಿಲ್ಲ ಎಂದು ನಿರ್ದೇಶಕ ಇಂದ್ರಜಿತ್​ ಪ್ರಶ್ನೆ ಮಾಡಿದ್ದಾರೆ.

ಶುಕ್ರವಾರ ಲಂಕೇಶ್​ ಆಪ್​ ಬಿಡುಗಡೆಯ ನಂತರ ಮಾತನಾಡಿದ ಅವರು, 'ಡ್ರಗ್ಸ್ ಮಾಫಿಯಾದಲ್ಲಿ ಇನ್ನೂ ಸಾಕಷ್ಟು ಜನ ಇದ್ದಾರೆ. ಆದರೆ, ಇದುವರೆಗೂ ಕೆಲವು ನಟಿಯರನ್ನು ಮಾತ್ರ ಬಂಧಿಸಲಾಗಿದೆ. ಯಾಕೆ, ಈ ಪ್ರಕರಣದಲ್ಲಿ ಬರೀ ನಟಿಯರು ಮಾತ್ರ ಇರುವುದಾ? ಇಲ್ಲಿ ಇನ್ನೂ ಸಾಕಷ್ಟು ಜನ ಇದ್ದಾರೆ. ಯಾಕೆ ರಾಜಕಾರಣಿ ಮಕ್ಕಳನ್ನ ಮತ್ತು ದೊಡ್ಡ ನಟರನ್ನ ಬಂದಿಸುತ್ತಿಲ್ಲ? ಯಾರೇ ತಪ್ಪು ಮಾಡಿದರೂ ಅವರು ಶಿಕ್ಷೆ ಆಗಲೇ ಬೇಕು' ಎಂದು ಇಂದ್ರಜಿತ್​ ಹೇಳಿದ್ದಾರೆ.

ಇದಕ್ಕೂ ಮುನ್ನ, ಕಳೆದ ತಿಂಗಳು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದ ಇಂದ್ರಜಿತ್​, ಡ್ರಗ್ಸ್​ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.

'ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ ಅದನ್ನು ಸಿಬಿಐಗೆ ವಹಿಸಬೇಕು. ಆಗ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಗಲಿವೆ. ಈ ವಿಷಯವಾಗಿ ತನಿಖೆಯಾದರೆ ಶವಗಳು ಕೂಡಾ ಎದ್ದು ಕೂರಲಿವೆ. ಡ್ರಗ್ಸ್ ಪ್ರಕರಣದ ತನಿಖೆ ತ್ವರಿತವಾಗಿ ಆಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, 'ಇಷ್ಟು ದಿನಗಳ ಕಾಲ ಆಗಿರುವುದು ಬಹಳ ಕಡಿಮೆಯೇ. ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡಿದರೆ, ಪೊಲೀಸರ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ. ಈ ದಂಧೆಯಲ್ಲಿ ನಟರು, ರಾಜಕಾರಣಿಗಳು, ಇವೆಂಟ್ ಮ್ಯಾನೇಜರ್‌ಗಳು ಸೇರಿದಂತೆ ಹಲವರು ಇದ್ದಾರೆ' ಎಂದು ಅವರು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net