

ಮುಂಬೈ: ಲಾಕ್ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಕೋಟ್ಯಂತರ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು. ಸಾಕಷ್ಟು ಮಂದಿಯ ನೆರವಿಗೆ ಧಾವಿಸಿ, ಕೈಲಾದ ಸಹಾಯ ಮಾಡಿದ್ದರು. ಆ ಕಾರ್ಯವನ್ನು ಪರಿಗಣಿಸಿ ಅವರಿಗೆ ಜಾಗತಿಕ ಮಟ್ಟದ ಶ್ರೇಷ್ಠ ಪುರಸ್ಕಾರವೊಂದು ಲಭಿಸಿದೆ.
ಸೋನು ಸೂದ್ ಅವರ ಮಾನವೀಯತೆ ಕಾರ್ಯವನ್ನು ಗುರುತಿಸಿರುವ ವಿಶ್ವಸಂಸ್ಥೆ ಪ್ರತಿಷ್ಠಿತ ‘ವಿಶೇಷ ಮಾನವೀಯತೆ ಆ್ಯಕ್ಷನ್’ ಅವಾರ್ಡ್ ನೀಡಿ ಗೌರವಿಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪ್ರತಿಷ್ಠಿತ ಎಸ್‌ಡಿಜಿ (ವಿಶೇಷ ಮಾನವೀಯ ಕ್ರಿಯಾ) ಪ್ರಶಸ್ತಿ ಇದಾಗಿದೆ.
ಸೆ. 29ರಂದು ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಅವಾರ್ಡ್ ಪಡೆದು ಮಾತನಾಡಿದ ಸೋನು, ‘ಇದೊಂದು ವಿರಳಾತಿ ವಿರಳ ಪ್ರಶಸ್ತಿ. ವಿಶ್ವಸಂಸ್ಥೆ ಗುರುತಿಸಿದ್ದು ಖುಷಿಯ ಸಂಗತಿ. ನಾನು ಏನು ಮಾಡಿದ್ದೇನೋ ಅದೆಲ್ಲವನ್ನು ನನ್ನ ಮನಃಪೂರ್ವಕವಾಗಿ ಖುಷಿಯಿಂದ ಮಾಡಿದ್ದೇನೆ. ಆ ಕಾರ್ಯ ಗುರುತಿಸಿ ಪುರಸ್ಕರಿಸಿದ್ದಕ್ಕೆ ಧನ್ಯವಾದಗಳು ಎಂದು ಸೋನು ಹೇಳಿಕೊಂಡಿದ್ದಾರೆ.
ಅಂದಹಾಗೆ ಈ ಪ್ರಶಸ್ತಿಯನ್ನು ಈ ಮೊದಲು ಲಿಯೋನಾರ್ಡೋ ಡಿಕಾಪ್ರಿಯೋ, ಏಂಜಲಿನಾ ಜೂಲಿ, ಪ್ರಿಯಾಂಕಾ ಚೋಪ್ರಾ ಸಹ ಪಡೆದುಕೊಂಡಿದ್ದರು. (ಏಜೆನ್ಸೀಸ್)