ನೀವು ನಮಗೆ ದೊಡ್ಡ ಸಮಸ್ಯೆ ಆಗಿಬಿಟ್ಟಿದ್ದೀರಿ ಎಂದರಂತೆ ಚಿರಂಜೀವಿ

Chiranjeevi - Sonu Sood
Published on

ಹೈದರಾಬಾದ್​: ಲಾಕ್​ಡೌನ್​ ಸಮಯದಲ್ಲಿ ನಿರ್ಗತಿಕ ಕಾರ್ಮಿಕರಿಗೆ ಸೂಕ್ತ ನೆರವು ನೀಡುವ ಮೂಲಕ ಅವರವರ ಊರುಗಳಿಗೆ ಕಳಿಸಿಕೊಟ್ಟು ನ್ಯಾಷನಲ್​ ಹೀರೋ ಆದವರು ಬಾಲಿವುಡ್​ ನಟ ಸೋನು ಸೂದ್​. ಈಗ ಅದೇ ಅವರಿಗೆ ಸಮಸ್ಯೆಯಾಗುತ್ತಿದೆ.

ವಿಷಯವೇನೆಂದರೆ, ಸೋನು ಇತ್ತೀಚಿನ ವರ್ಷಗಳಲ್ಲಿ ನೆಗೆಟಿವ್​ ಪಾತ್ರಗಳಲ್ಲೇ ಹೆಚ್ಚು ಮಿಂಚಿದವರು. ನೆಗೆಟಿವ್​ ಪಾತ್ರಗಳಿಂದಲೇ ತಮ್ಮ ಬದುಕು ಕಟ್ಟಿಕೊಂಡವರು. ಈಗ ಅವರಿಗೆ ನೆಗೆಟಿವ್​ ಪಾತ್ರ ಕೊಡುವುದಕ್ಕೆ ಜನ ಹೆದರುತ್ತಿದ್ದಾರಂತೆ. ಅಷ್ಟೇ ಅಲ್ಲ, ಹೀರೋಗಳು ಸಹ ಸೋನುಗೆ ಹೊಡೆದರೆ ಜನರಿಂದ ಎಲ್ಲಿ ತೆಗೆಸಿಕೊಳ್ಳಬೇಕಾಗುತ್ತದೋ ಎಂಬ ಭಯದಲ್ಲಿದ್ದಾದರಂತೆ.

ಈ ವಿಷಯವಾಗಿ ಒಂದು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಇತ್ತೀಚೆಗೆ ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಆಕ್ಷನ್​ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಆದರೆ, ನನಗೆ ಹೊಡೆಯುವುದಕ್ಕೆ ಮೆಗಾಸ್ಟಾರ್​ ಚಿರಂಜೀವಿ ಹಿಂದೇಟು ಹಾಕಿದರು. ಯಾಕೆ ಎಂದು ಕೇಳಿದಾಗ, 'ನೀವು ನಮಗೆ ದೊಡ್ಡ ಸಮಸ್ಯೆ ಆಗಿಬಿಟ್ಟಿದ್ದೀರಿ. ಒಂದು ಪಕ್ಷ ನಾನು ನಿಮಗೆ ಹೊಡೆದರೆ ಜನ ನಮಗೆ ಶಾಪ ಹಾಕುತ್ತಾರೆ. ಏಕೆಂದರೆ, ನೀವೀಗ ಹೀರೋ ಆಗಿಬಿಟ್ಟಿದ್ದೀರಿ ...' ಎಂದು ಹೇಳಿದರು' ಎಂದು ನೆನಪಿಸಿಕೊಂಡಿದ್ದಾರೆ ಸೋನು.

ಇನ್ನೊಂದು ದೃಶ್ಯದಲ್ಲಿ ಚಿರಂಜೀವಿ ತಮ್ಮ ಪಾದವನ್ನು ಸೋನು ಮೇಲಿಡಬೇಕಿತ್ತಂತೆ. ಅದರಿಂದ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ, ಅದನ್ನು ಬೇರೆ ತರಹ ಶೂಟ್​ ಮಾಡಲಾಗಿದೆ ಎಂದು ಸೋನು ಹೇಳಿಕೊಂಡಿದ್ದಾರೆ.

ಇದೆಲ್ಲಾ ಕಾರಣಗಳಿಗಾಗಿಯೇ ಅವರು ಕೆಲವು ವರ್ಷಗಳ ಕಾಲ ನೆಗೆಟಿವ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಬಿಟ್ಟು, ಬರೀ ಹೀರೋ ಪಾತ್ರಗಳತ್ತಲೇ ಹೆಚ್ಚು ಗಮನಹರಿಸುವ ಬಗ್ಗೆ ಯೋಚಿಸುತ್ತಿದ್ದಾರಂತೆ. ಈಗ ಒಪ್ಪಿರುವ ಚಿತ್ರಗಳನ್ನು ಮುಗಿಸಿ, ಆ ನಂತರ ಹೀರೋ ಪಾತ್ರಗಳಿರುವ ಚಿತ್ರಗಳಲ್ಲೇ ನಟಿಸುವುದಕ್ಕೆ ಸೋನು ತೀರ್ಮಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net