30 ಸಾವಿರ ಫಾಲೋವರ್ಸ್​ ಆಗ್ಲೇಬೇಕು! ಯುವತಿಯ ಇನ್​ಸ್ಟಾಗ್ರಾಂಗೆ ಪುಷ್ಟರಾಜ್ ಬೂಸ್ಟರ್​ ಡೋಸ್​

Allu Arjun
Published on

ಹೈದರಾಬಾದ್​: ಐಕಾನ್​ ಸ್ಟಾರ್ ಅಲ್ಲು ಅರ್ಜುನ್ ಖ್ಯಾತಿಯ ಬಗ್ಗೆ ಯಾರಿಗೂ ಹೆಚ್ಚಿಗೆ ಹೇಳಬೇಕಿಲ್ಲ. ಪುಷ್ಪ ಸಿನಿಮಾ ಬಿಡುಗಡೆಯಾದ ಬಳಿಕವಂತೂ ಅಲ್ಲು ಅರ್ಜುನ್​ ನ್ಯಾಷನಲ್​ ಸ್ಟಾರ್​ ಆಗಿಬಿಟ್ಟಿದ್ದಾರೆ. ಇದೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಅಲ್ಲು ಅರ್ಜುನ್​ ಅವರ ಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇದೀಗ ತಮ್ಮ ಖ್ಯಾತಿಯನ್ನು ಇನ್ನೊಬ್ಬರಿಗೆ ಹಂಚುವ ಮೂಲಕ ಅಲ್ಲು ಅರ್ಜುನ್​ ದೊಡ್ಡತನ ಮೆರೆದಿದ್ದಾರೆ.

ಅರೇ ಅದು ಹೇಗೆ ಸಾಧ್ಯ? ಊಟ ಮತ್ತು ದುಡ್ಡು ಹಂಚಿಕೊಳ್ಳುವುದನ್ನು ನೋಡಿದ್ದೇವೆ ಖ್ಯಾತಿ ಹಂಚಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಮುಂದಿದೆ. ಅಲ್ಲು ಅರ್ಜುನ್​ ಅವರ ಸೋಶಿಯಲ್ ಮೀಡಿಯಾ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಲಿವುಡ್ ಹೀರೋ ಎಂಬ ದಾಖಲೆಯನ್ನೂ ಅಲ್ಲು ಅರ್ಜುನ್ ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಅಲ್ಲು ಅರ್ಜುನ್​ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಬೇರೆಯವರಿಗೆ ಸಹಾಯ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಒಬ್ಬರ ಫಾಲೋವರ್ಸ್​ ಹೆಚ್ಚಿಸಲು ಅಲ್ಲು ಅರ್ಜುನ್​ ವಿಡಿಯೋ ಮೂಲಕ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಇದೀಗ ಆ ವಿಡಿಯೋ ವೈರಲ್​ ಆಗಿದೆ. ಹಾಗಾದರೆ, ಆ ಸೋಶಿಯಲ್ ಮೀಡಿಯಾ ಪ್ರಭಾವಿ ಯಾರು..?

ತೆಲಂಗಾಣ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯ ಜನರಿಂದಿಡಿದು ಟಾಲಿವುಡ್ ಸೆಲೆಬ್ರಿಟಿಗಳು ಕೂಡ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಅಲ್ಲು ಅರ್ಜುನ್ ಕೂಡ ಜುಬಿಲಿ ಹಿಲ್ಸ್​ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ವಿಶೇಷ ಅಂದರೆ, ಅಲ್ಲು ಅರ್ಜುನ್ ಜನ ಸಾಮಾನ್ಯರ ಜತೆಗೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಳಿಕ ಅಲ್ಲಿನ ಅಭಿಮಾನಿಯೊಬ್ಬರಿಗೆ ವಿಡಿಯೋ ಕೂಡ ಮಾಡಿಕೊಟ್ಟರು.

ಅಂದಹಾಗೆ ಅಲ್ಲು ಅರ್ಜುನ್​ನಿಂದ ವಿಡಿಯೋ ಭಾಗ್ಯ ಪಡೆದ ಆ ಸೋಶಿಯಲ್ ಮೀಡಿಯಾ ಪ್ರಭಾವಿ ಹೆಸರು ಅಶ್ವಿನಿ. ಆಕೆಯ ಜತೆ ಜೊತೆ ರೀಲ್ಸ್​ ಮಾಡಿದ ಅಲ್ಲು ಅರ್ಜುನ್, ಒಳ್ಳೆಯ ಫಾಲೋವರ್ಸ್​ ಪಡೆಯಲು ಈ ವಿಡಿಯೋ ಮಾಡುತ್ತಿದ್ದೇನೆ. ಈಗ 13 ಸಾವಿರ ಫಾಲೋವರ್ಸ್ ಇದ್ದಾರೆ ಮತ್ತು ಈ ವಿಡಿಯೋ ಮೂಲಕ 30 ಸಾವಿರ ಫಾಲೋವರ್ಸ್ ಬರಲಿದ್ದಾರೆ ಎಂದು ಹೇಳಿದರು.

ಇದೇ ವಿಡಿಯೋವನ್ನು ಅಶ್ವಿನಿ ತನ್ನ ಇನ್​ಸ್ಟಾಗ್ರಾಂನಲ್ಲಿ ಇದೀಗ ಪೋಸ್ಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ಪೋಸ್ಟ್​ ಮಾಡಿದ ಕೇವಲ 4 ಗಂಟೆಗಳಲ್ಲಿ 5 ಸಾವಿರ ಫಾಲೋವರ್ಸ್​ ಹೆಚ್ಚಾಗಿದೆ. 13 ಸಾವಿರ ಇದ್ದ ಫಾಲೋವರ್ಸ್​ ಇದೀಗ 18 ಸಾವಿರ ಆಗಿದೆ. ಸದ್ಯ ವಿಡಿಯೋ ವೈರಲ್​ ಆಗುತ್ತಿದ್ದು, ಇನ್ನಷ್ಟು ಹೆಚ್ಚಾಗಲಿದೆ. ಒಂದೇ ಒಂದು ವಿಡಿಯೋ ಇದೀಗ ಅಶ್ವಿನಿ ಇನ್​ಸ್ಟಾಗ್ರಾಂ ಖಾತೆಯ ಗತಿಯನ್ನೇ ಬದಲಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net