ಐಶ್ವರ್ಯಾ ರೈ 'ಜೆರಾಕ್ಸ್ ಕಾಪಿ'ಗೆ ಎದುರಾದ ಆ ದೊಡ್ಡ ಸಂಕಷ್ಟ ಯಾವುದು? ಸ್ನೇಹಾ ಉಲ್ಲಾಲ್ ಕಣ್ಣೀರಿನ ಕತೆಯಿದು... Sneha Ullal

ಐಶ್ವರ್ಯಾ ರೈ 'ಜೆರಾಕ್ಸ್ ಕಾಪಿ'ಗೆ ಎದುರಾದ ಆ ದೊಡ್ಡ ಸಂಕಷ್ಟ ಯಾವುದು? ಸ್ನೇಹಾ ಉಲ್ಲಾಲ್ ಕಣ್ಣೀರಿನ ಕತೆಯಿದು... Sneha Ullal
ಐಶ್ವರ್ಯಾ ರೈ 'ಜೆರಾಕ್ಸ್ ಕಾಪಿ'ಗೆ ಎದುರಾದ ಆ ದೊಡ್ಡ ಸಂಕಷ್ಟ ಯಾವುದು? ಸ್ನೇಹಾ ಉಲ್ಲಾಲ್ ಕಣ್ಣೀರಿನ ಕತೆಯಿದು... Sneha Ullal
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಸ್ನೇಹಾ ಉಲ್ಲಾಲ್, ಐಶ್ವರ್ಯಾ ರೈ ಅವರಂತೆಯೇ ಕಾಣುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು
  • ಹೋಲಿಕೆಯಿಂದ ಐಶ್ವರ್ಯಾ ಅವರಿಗೆ ಬೇಸರವಾಗಬಹುದು ಎಂದು ಭಾವಿಸಿದ್ದರು ಸ್ನೇಹಾ ಉಲ್ಲಾಲ್​
  • ಬಾಲಿವುಡ್‌ನ ಹೋಲಿಕೆಯ ಹಣೆಪಟ್ಟಿಯಿಂದ ಹೊರಬರಲು ದಕ್ಷಿಣದತ್ತ ನಡೆದ ಸ್ನೇಹಾ
  • 2026ರ 'ನೀಲಕಂಠ' ಚಿತ್ರದ ಮೂಲಕ ಗ್ಲಾಮರ್ ಬದಿಗಿಟ್ಟು ನಟನೆಗೆ ಒತ್ತು ನೀಡುವ ಪಾತ್ರಗಳೊಂದಿಗೆ ಹೊಸ ಇನಿಂಗ್ಸ್ ಆರಂಭ
Sneha Ullal : ಭಾರತೀಯ ಚಿತ್ರರಂಗದಲ್ಲಿ ಕೆಲವರು ತಮ್ಮ ನಟನೆಯಿಂದ ಗುರುತಿಸಿಕೊಂಡರೆ, ಇನ್ನು ಕೆಲವರು ತಮ್ಮ ವಿಭಿನ್ನ ರೂಪದಿಂದಲೇ ರಾತ್ರೋರಾತ್ರಿ ಸಂಚಲನ ಮೂಡಿಸುತ್ತಾರೆ. 2005ರಲ್ಲಿ ಬಿಡುಗಡೆಯಾದ 'ಲಕ್ಕಿ: ನೋ ಟೈಮ್ ಫಾರ್ ಲವ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸ್ನೇಹಾ ಉಲ್ಲಾಲ್ ಅವರ ವಿಚಾರದಲ್ಲೂ ಇದೇ ಸಂಭವಿಸಿತ್ತು. ಅವರು ನೋಡಲು ಅಚ್ಚುಕಟ್ಟಾಗಿ ಐಶ್ವರ್ಯಾ ರೈ ಅವರಂತೆಯೇ ಇದ್ದ ಕಾರಣ, ಇಡೀ ದೇಶವೇ ಅವರತ್ತ ತಿರುಗಿ ನೋಡುವಂತಾಯಿತು. ಐಶ್ವರ್ಯಾ ರೈ ಅವರ 'ಜೆರಾಕ್ಸ್ ಕಾಪಿ' ಎಂದೇ ಆ ಕಾಲದಲ್ಲಿ ಸ್ನೇಹಾ ಅವರನ್ನು ಬಣ್ಣಿಸಲಾಗಿತ್ತು.
ಆದರೆ, ಈ ಹೋಲಿಕೆಯು ಸ್ನೇಹಾ ಉಲ್ಲಾಲ್ ಅವರಿಗೆ ವರದಾನಕ್ಕಿಂತ ಹೆಚ್ಚಾಗಿ ಆತಂಕವನ್ನೇ ತಂದೊಡ್ಡಿತ್ತು. ತಮ್ಮದೇ ಆದ ಸ್ವಂತ ಗುರುತನ್ನು ರೂಪಿಸಿಕೊಳ್ಳಲು ಈ ಹೋಲಿಕೆ ಅಡ್ಡಿಯಾಗಬಹುದು ಎಂಬ ಭಯ ಅವರನ್ನು ಕಾಡುತ್ತಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಹಳೆಯ ನೆನಪುಗಳನ್ನು ಹಂಚಿಕೊಂಡಿರುವ ಸ್ನೇಹಾ, ತಾವು ಮೊದಲ ಬಾರಿಗೆ ಐಶ್ವರ್ಯ ರೈ ಅವರನ್ನು ಭೇಟಿಯಾದಾಗ ಎಷ್ಟು ಒತ್ತಡಕ್ಕೆ ಒಳಗಾಗಿದ್ದೆ ಎಂಬುದನ್ನು ಸ್ಮರಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಈ ಹೋಲಿಕೆಯು ಸೃಷ್ಟಿಸಿದ ಚರ್ಚೆಗಳು ತಮ್ಮ ವ್ಯಕ್ತಿತ್ವದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅವರು ಆಗ ತೀವ್ರವಾಗಿ ಚಿಂತಿತರಾಗಿದ್ದರು ಎಂಬುದನ್ನು ತಿಳಿಸಿದ್ದಾರೆ.
ಐಶ್ವರ್ಯಾ ರೈ ಅವರೊಂದಿಗಿನ ಹೋಲಿಕೆಯಿಂದ ಐಶ್ವರ್ಯ ಅವರಿಗೆ ಮುಜುಗರವಾಗಬಹುದು ಎಂದು ಅಂದು ಸ್ನೇಹಾ ಉಲ್ಲಾಲ್ ತುಂಬಾ ಹೆದರಿದ್ದರು. ಈ ಬಗ್ಗೆ ನೆನಪು ಹಂಚಿಕೊಂಡಿರುವ ಅವರು, "ನಾನು ಅವರನ್ನು ಭೇಟಿಯಾದಾಗ, 'ಕ್ಷಮಿಸಿ, ನನ್ನನ್ನು ದ್ವೇಷಿಸಬೇಡಿ' ಎಂದು ಕೇಳಿಕೊಂಡಿದ್ದೆ. ಆದರೆ, ಐಶ್ವರ್ಯ ರೈ ಅವರು ಅತ್ಯಂತ ಪ್ರೀತಿಯಿಂದ ನನ್ನನ್ನು ಬಾಲಿವುಡ್ ಕುಟುಂಬಕ್ಕೆ ಸ್ವಾಗತಿಸಿದ್ದರು" ಎಂದು ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ಈ ಹೋಲಿಕೆಯ ಚರ್ಚೆಗಳು ಹೆಚ್ಚಾದಂತೆ ಟಾಲಿವುಡ್‌ ಕಡೆಗೆ ಮುಖ ಮಾಡಿದ ಈ ಸುಂದರಿ, 'ಉಲ್ಲಾಸಂಗ ಉತ್ಸಾಹಂಗ' ಮತ್ತು ಬಾಲಕೃಷ್ಣ ಅವರ ಎದುರು ನಟಿಸಿದ 'ಸಿಂಹ' ಅಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ಸ್ಟಾರ್ ನಟಿಯಾಗಿ ಮಿಂಚಿದರು.
ಸ್ನೇಹಾ ಉಲ್ಲಾಲ್ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ 'ಆಟೋ ಇಮ್ಯೂನ್ ಡಿಸಾರ್ಡರ್' (Autoimmune disorder) ಎಂಬ ಕಾಯಿಲೆ ಅವರನ್ನು ಬಾಧಿಸಿತು, ಇದರಿಂದಾಗಿ ವಿಪರೀತ ಸುಸ್ತಿನಿಂದ ಚಿತ್ರೀಕರಣದಲ್ಲಿ ಭಾಗವಹಿಸಲಾಗದೆ ಸುಮಾರು ನಾಲ್ಕು ವರ್ಷಗಳ ಕಾಲ ಅವರು ಸಿನಿಮಾರಂಗದಿಂದ ವಿರಾಮ ಪಡೆಯಬೇಕಾಯಿತು.
2020ರಲ್ಲಿ OTT ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಿದ ಅವರು, ಈಗ 2026ರಲ್ಲಿ ಬಿಡುಗಡೆಯಾಗಲಿರುವ 'ನೀಲಕಂಠ' ಎಂಬ ತೆಲುಗು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯ ಗ್ಲಾಮರ್ ಪಾತ್ರಗಳಿಗಿಂತ ನಟನೆಗೆ ಆದ್ಯತೆ ಇರುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನದ ಎರಡನೇ ಇನಿಂಗ್ಸ್ ಆರಂಭಿಸಲು ಅವರು ಸಜ್ಜಾಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net