

ಬೆಂಗಳೂರು: ಕಳೆದ ಒಂದು ತಿಂಗಳಲ್ಲಿ ವಾರಕ್ಕೆ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುವುದು ಮಾಮೂಲಿಯಾಗಿಬಿಟ್ಟಿದೆ. ಕಳೆದ ವಾರ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಈಗ ಪುನಃ ಈ ಶುಕ್ರವಾರ (ಡಿ.2) ಆರು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದು ಸದ್ಯಕ್ಕೆ ಸಿಕ್ಕಿರುವ ಲೆಕ್ಕ ಅಷ್ಟೇ. ಈ ಸಂಖ್ಯೆಯಲ್ಲಿ ಹೆಚ್ಚಳ ಆದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ 'ವಾಸಂತಿ ನಲಿದಾಗ', '2ನೇ ಲೈಫ್', 'ಧರಣಿ ಮಂಡಲ ಮಧ್ಯದೊಳಗೆ', 'ನೆನಪು ಮರುಕಳಿಸಿದಾಗ', 'ಫ್ಲಾಟ್ ನಂಬರ್ 9' ಮತ್ತು 'ತಿಮ್ಮಯ್ಯ ಆಂಡ್ ತಿಮ್ಮಯ್ಯ' ಚಿತ್ರಗಳು ಸೇರಿವೆ.
ಈ ಪೈಕಿ, ಬಿಗ್ ಬಜೆಟ್ ಅಥವಾ ಬಹು ನಿರೀಕ್ಷಿತ ಚಿತ್ರಗಳು ಎಂಬ ಚಿತ್ರಗಳು ಯಾವುದೂ ಇಲ್ಲ. ಇದ್ದುದರಲ್ಲೇ 'ತಿಮ್ಮಯ್ಯ ಅಂಡ್ ತಿಮ್ಮಯ್ಯ' ಮತ್ತು 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರಗಳ ಬಗ್ಗೆ ಸ್ವಲ್ಪ ನಿರೀಕ್ಷೆ ಇರಬಹುದು. 'ತಿಮ್ಮಯ್ಯ ಅಂಡ್ ತಿಮ್ಮಯ್ಯ' ಚಿತ್ರದಲ್ಲಿ ಅನಂತ್ ನಾಗ್ ಮತ್ತು ದಿಗಂತ್ ತಾತ-ಮೊಮ್ಮಗನಾಗಿ ಮೊದಲ ಬಾರಿಗೆ ಅಭಿನಯಿಸಿದ್ದು, ಇದು ಅವರಿಬ್ಬನ ನಡುವಿನ ಸೆಂಟಿಮಂಎಟಲ್ ಮತ್ತು ಕಾಮಿಡಿ ಚಿತ್ರವಾಗಿದೆ. ಇನ್ನು, 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿ 'ಗುಳ್ಟೂ' ನವೀನ್ ನಟಿಸಿದ್ದು, ಆ ಚಿತ್ರ ಬಿಡುಗಡೆಯಾಗಿ ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಅವರ ಚಿತ್ರವಾಗಿದೆ. ನವೀನ್ಗೆ ನಾಯಕಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದಾರೆ.
ಮಿಕ್ಕಂತೆ 'ವಾಸಂತಿ ನಲಿದಾಗ', '2ನೇ ಲೈಫ್', 'ನೆನಪು ಮರುಕಳಿಸಿದಾಗ' ಮತ್ತು 'ಫ್ಲಾಟ್ ನಂಬರ್ 9' ಚಿತ್ರಗಳಲ್ಲಿ ಹೊಸ ನಾಯಕ-ನಾಯಕಿಯರು ನಟಿಸಿದ್ದಾರೆ. ಅವರೆಲ್ಲರೂ ಹೊಸ ಮುಖಗಳಾಗಿದ್ದು, ತಮ್ಮ ಮೊದಲ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟೇ ಪರಿಚಯವಾಗಿದೆ.
ಮೊದಲೇ ಹೇಳಿದಂತೆ, ಸದ್ಯಕ್ಕೆ ಆರು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈಗಿನ ಶುಕ್ರವಾರ ಅಷ್ಟೇ. ಶುಕ್ರವಾರಕ್ಕೆ ಇನ್ನೂ ಮೂರು ದಿನಗಳಿದ್ದು, ಈ ಮೂರು ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾದರೆ ಅಥವಾ ಕಡಿಮೆಯಾದರೆ ಹೇಳುವುದು ಕಷ್ಟ.