'ಟಗರು ಪಲ್ಯ' ಚಿತ್ರಕ್ಕೆ 'ನೆನಪಿರಲಿ' ಪ್ರೇಮ್​ ಮಗಳು ಅಮೃತಾ ನಾಯಕಿ

Prem Daughter Amrutha
Published on

ಬೆಂಗಳೂರು:'ಡಾಲಿ' ಧನಂಜಯ್​ ನಿರ್ಮಾಣದ 'ಟಗರು ಪಲ್ಯ' ಚಿತ್ರಕ್ಕೆ ಅವರ ಕ್ಲೋಸ್​ ಫ್ರೆಂಡ್​ ನಾಗಭೂಷಣ್​ ನಾಯಕನಾಗಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ. 'ನೆನಪಿರಲಿ' ಪ್ರೇಮ್​ ಮಗಳು ಅಮೃತಾ ಈ ಚಿತ್ರಕ್ಕೆ ನಾಯಕಿಯಾಗುವ ಮೂಲಕ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

'ನೆನಪಿರಲಿ' ಪ್ರೇಮ್​ ಮಗ ಏಕಾಂತ್​ ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಶರಣ್​ ಅಭಿನಯದ 'ಗುರು ಶಿಷ್ಯರು' ಚಿತ್ರದಲ್ಲೂ ಅವರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಅಕ್ಕ ಅಮೃತಾ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ನಾಗಭೂಷಣ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರವನ್ನು ಉಮೇಶ್​ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಕಥೆಗೆ ತಕ್ಕ ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆಸಿದ್ದರಂತೆ. ಆ ಸಂದರ್ಭದಲ್ಲಿ ಒಂದು ಕಾರ್ಯಕ್ರಮದಲ್ಲಿ ಪ್ರೇಮ್​ ಅವರ ಮಗಳನ್ನು ನೋಡಿದ್ದಾರೆ. ಅಮೃತಾ ಆ ಪಾತ್ರಕ್ಕೆ ಹೊಂದುತ್ತಾರೆ ಎಂದು ಪ್ರೇಮ್​ ಅವರನ್ನು ಸಂಪರ್ಕಿಸಿದ್ದಾರೆ. ಮಗಳಿಗೆ ಇಷ್ಟವಾದರೆ ತಮಗೂ ಓಕೆ ಎಂದು ಪ್ರೇಮ್​ ಸಹ ಹೇಳಿದ್ದಾರೆ. ಕಥೆ ಇಷ್ಟಪಟ್ಟ ಅಮೃತಾ, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

ಸದ್ಯ ಇಂಜಿನಿಯರಿಂಗ್​ ಓದುತ್ತಿರುವ ಅಮೃತಾ, 'ಟಗರು ಪಲ್ಯ' ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಾಗಭೂಷಣ್​ ಮತ್ತು ಅಮೃತಾ ಅಲ್ಲದೆ, ಚಿತ್ರದಲ್ಲಿ ರಂಗಾಯಣ ರಘು, ಶರತ್​ ಲೋಹಿತಾಶ್ವ, ತಾರಾ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್​ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net