

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳಿಗೇನೂ ಬರವಿಲ್ಲ. ಈಗಾಗಲೇ ಹಲವು ನಟ-ನಟಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಆ ಸಾಲಿಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸಹ ಸೇರುತ್ತಾರಾ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣ, ವಸಿಷ್ಠ ಮತ್ತು ಹರಿಪ್ರಿಯಾ ಮದುವೆಯಾಗುತ್ತಾರೆ ಎಂಬ ಸುದ್ದಿಗಳು.
ಕನ್ನಡ ಚಿತ್ರರಂಗ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ಗಳ ಪೈಕಿ ವಸಿಷ್ಠ ಸಹ ಒಬ್ಬರು. ಇನ್ನು, ಹರಿಪ್ರಿಯಾ ಮದುವೆ ಯಾವಾಗ ಎಂಬ ಪ್ರಶ್ನೆ ಸಹ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಹೀಗಿರುವಾಗಲೇ ಅವರಿಬ್ಬರೂ ಮದುವೆಯಗುವ ಸಾಧ್ಯತೆ ಇದೆ ಎಂಬ ಮಾತು ಒಂದೆರೆಡು ದಿನಗಳಿಂದ ಓಡಾಡುತ್ತಿವೆ.
ಹೀಗೆ ಓಡಾಡುವುದಕ್ಕೆ ಕಾರಣವೂ ಇದೆ. ವಸಿಷ್ಠ ಜತೆ ಹರಿಪ್ರಿಯಾ ಡ್ಯಾನ್ಸ್ ಮಾಡಿರೋ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೆಯೇ, ವಸಿಷ್ಠ ಬರ್ತಡೇಗೆ 'ಹ್ಯಾಪಿ ಬರ್ತಡೇ ಪಾರ್ಟ್ನರ್' ಅಂತ ಹರಿಪ್ರಿಯಾ ಪೋಸ್ಟ್ ಹಾಕಿದ್ದು, 'ಥಾಂಕ್ ಯು ಪಾರ್ಟ್ನರ್' ಅಂತ ವಸಿಷ್ಠ ರಿಪ್ಲೇ ಕೂಡ ಮಾಡಿದ್ದಾರೆ. ಹರಿಪ್ರಿಯಾ ಮೂಗು ಚುಚ್ಚಿಸೋ ಕಾರ್ಯದಲ್ಲಿ ವಸಿಷ್ಠ ಸಿಂಹ ಕೂಡ ಜತೆಯಲ್ಲಿದ್ದರು. ತಾಯಿ ಮಗುವನ್ನು ಅಪ್ಪಿದಂತೆ ಹರಿಪ್ರಿಯಾನ ಅಪ್ಪಿಕೊಂಡಿದ್ದ ವಸಿಷ್ಠ ಸಿಂಹ ಫೋಟೊಗಳು ಹರಿದಾಡಿದ್ದವು. ಇವೆಲ್ಲವೂ ಅವರ ಪ್ರೇಮಕಥೆಗೆ ಸಾಕ್ಷಿ ಎಂದು ಹೇಳಲಾಗುತ್ತಿದೆ.
ಇನ್ನು, ತೆಲುಗಿನ ‘ಎವರು’ ಚಿತ್ರದ ಕನ್ನಡ ರಿಮೇಕ್ ಸಿನಿಮಾದಲ್ಲಿ ವಸಿಷ್ಠ-ಹರಿಪ್ರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ.
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪರಸ್ಪರ ಪ್ರೀತಿಸುತ್ತಿದ್ದಾರಾ? ಸದ್ಯದಲ್ಲೇ ಮದುವೆಯಾಗುತ್ತಾರಾ? ಎಂದು ಕೇಳುವುದಕ್ಕೆ, 'ವಿಜಯವಾಣಿ' ಇಬ್ಬರನ್ನೂ ಸಂಪರ್ಕಿಸುವ ಪ್ರಯತ್ನ ಮಾಡಿತು. ಆದರೆ, ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.