'ಅಶ್ವತ್ಥಾಮ'ನಾಗುತ್ತಾರಾ ಸುದೀಪ್​? ಕೆಆರ್​ಜಿ ಸ್ಟುಡಿಯೋಸ್​ನಿಂದ ಚಿತ್ರ ನಿರ್ಮಾಣ?

Ashwatthama
Published on

ಬೆಂಗಳೂರು: 'ವಿಕ್ರಾಂತ್​ ರೋಣ' ಚಿತ್ರೀಕರಣ ಸಂದರ್ಭದಲ್ಲಿ ಅನೂಪ್​ ಭಂಡಾರಿ ನಿರ್ದೇಶನದಲ್ಲಿ 'ಅಶ್ವತ್ಥಾಮ' ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ಸುದೀಪ್​ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ನಂತರ 'ಅಶ್ವತ್ಥಾಮ' ಎಂಬ ಶೀರ್ಷಿಕೆ ನಿರ್ದೇಶಕ ಸಚಿನ್​ ಬಳಿ ಇದೆ ಮತ್ತು ಅವರು ಶಿವರಾಜಕುಮಾರ್​ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಣೆಯಾಯಿತು.

ಈಗ್ಯಾಕೆ ಈ ವಿಷಯ ಎಂದರೆ, ಸುದೀಪ್​ ಅಭಿನಯದಲ್ಲಿ 'ಅಶ್ವತ್ಥಾಮ' ಎಂಬ ಚಿತ್ರವನ್ನು ಅನೂಪ್ ನಿರ್ದೇಶಿಸಲಿದ್ದಾರೆ ಮತ್ತು ಕೆಆರ್​ಜಿ ಸ್ಟುಡಿಯೋಸ್​ ಸಂಸ್ಥೆಯಿಂದ ಈ ಚಿತ್ರನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಓಡಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್​ ಗೌಡ, ಸುದೀಪ್​ ಅವರನ್ನು ಭೇಟಿ ಮಾಡಿದ್ದರು. ಆಗ ಸುದೀಪ್​, ಕೆಆರ್​ಜಿ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸಬಹುದು ಎಂಬ ಸುದ್ದಿ ಇತ್ತು. ಈಗ ಕೆಆರ್​ಜಿ ಸ್ಟುಡಿಯೋಸ್​ನ ಖಾತೆಯಿಂದ ಘೋಷಣೆ ಆಗಿರುವುದರಿಂದ, ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಆದರೆ, ವಿಷಯವೇನೆಂದರೆ, ಇದು ಕೆಆರ್​ಜಿ ಸ್ಟುಡಿಯೋಸ್​ನ ಅಸಲಿ ಖಾತೆಯಲ್ಲ. ನಕಲಿ ಖಾತೆ. ಹಾಗಾಗಿ, ಈ ಸುದ್ದಿ ಸಹ ಸುಳ್ಳು. ಹಿಂದೆ ಯಾವಾಗಲೋ ಕೇಳಿ ಬಂದ ಸುದ್ದಿಗೆ ಹೊಸ ಬಣ್ಣ ಬಳಿದು ಮರುಪ್ರಸಾರ ಮಾಡಲಾಗಿದೆ. ಮೂಲಗಳ ಪ್ರಕಾರ, ಹೊಂಬಾಳೆ ಅಥವಾ ಕೆಆರ್​ಜಿ ಸ್ಟುಡಿಯೋಸ್​ಗಾಗಿ ಸುದೀಪ್​ ಮುಂದೊಂದು ದಿನ ಚಿತ್ರ ಮಾಡುವುದು ಹೌದಾದರೂ, ಅದು 'ಅಶ್ವತ್ಥಾಮ' ಆಗಿರುವುದಿಲ್ಲವಂತೆ. ಸದ್ಯಕ್ಕೆ ಯಾವ ತರಹದ ಚಿತ್ರ ಮಾಡಬೇಕು ಎಂಬ ವಿಷಯ ಇನ್ನೂ ಮಾತುಕಥೆಯ ಹಂತದಲ್ಲಿದೆಯಂತೆ.

ಅಂದಹಾಗೆ, 'ವಿಕ್ರಾಂತ್ ರೋಣ' ನಂತರ ಸುದೀಪ್​ ಅಭಿನಯದ ಯಾವುದೇ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿಲ್ಲ. ತಮಿಳು ನಿರ್ದೇಶಕ ವೆಂಕಟ್​ ಪ್ರಭು ಮತ್ತು ಕನ್ನಡದ ನಂದಕಿಶೋರ್​ ನಿರ್ದೇಶನದ ಚಿತ್ರಗಳಲ್ಲಿ ಸುದೀಪ್​ ಅಭಿನಯಿಸುತ್ತಾರೆ ಎಂಬ ಸುದ್ದಿ ಇದೆಯಾದರೂ, ಸದ್ಯಕ್ಕೆ ಸುದೀಪ್​ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net