ನಮ್ಮ ಮಗುವಿಗಾಗಿ ಎದುರುನೋಡ್ತಿದ್ದೇವೆ: ಕನ್ನಡ ರಾಜ್ಯೋತ್ಸವದಂದೇ ಶುಭ ಸುದ್ದಿ ಹಂಚಿಕೊಂಡ ಸಿಂಹಪ್ರಿಯಾ! Simhapriya

Simhapriya
Published on

ಬೆಂಗಳೂರು: ಸಿಂಹಪ್ರಿಯಾ ( Simhapriya ) ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ಅಭಿಮಾನಿಗಳ ಬಳಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಚಂದನವನದ ಈ ಮುದ್ದಾದ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.

ಹೌದು, ಹರಿಪ್ರಿಯಾ ಅವರು ಗರ್ಭಿಣಿಯಾಗಿದ್ದಾರೆ. ವಸಿಷ್ಠ ಸಿಂಹ ಅವರು ತಂದೆಯಾಗಿ ಬಡ್ತಿ ಪಡೆಯಲಿದ್ದಾರೆ. ಈ ಖುಷಿಯ ಸಂಗತಿಯನ್ನು ಸಿಂಹಪ್ರಿಯಾ ದಂಪತಿ ವಿನೂತನವಾಗಿ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ. ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿ ವಿಶೇಷ ಫೋಟೋಶೂಟ್​ ಮಾಡಿಸಿರುವ ಸಿಂಹಪ್ರಿಯಾ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗಪಡಿಸಿದೆ. ಫೋಟೋಗಳಲ್ಲಿ ಹರಿಪ್ರಿಯಾ ಬೇಬಿ ಬಂಪ್​ ಪ್ರದರ್ಶಿಸಿದ್ದು, ವಸಿಷ್ಠ ಸಿಂಹ ಅವರು ಬೇಬಿ ಬಂಪ್​ ಹಿಡಿದು ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ.. ಹೌದು, ನಾವು ನಮ್ಮ “ಕುಡಿ”ಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಅಂದಹಾಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ಕಳೆದ ವರ್ಷದ ಅಂದರೆ, 2023ರ ಜನವರಿ 26ರಂದು ಮದುವೆಯಾದರು. ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ಮದುವೆ ಸಮಾರಂಭ ನಡೆಯಿತು. ಇದಾದ ಬಳಿಕ 28ರಂದು ಬೆಂಗಳೂರಿನ ಗೋಲ್ಡನ್​ ಪಾಮ್ಸ್​ ರೆಸಾರ್ಟ್​​ನಲ್ಲಿ ಆರತಕ್ಷತೆ ನಡೆಯಿತು. ಈ ವೇಳೆ ಚಿತ್ರರಂಗದ ಸಾಕಷ್ಟು ಗಣ್ಯರು ಮದುವೆಗೆ ಆಗಮಿಸಿ, ದಂಪತಿಗೆ ಶುಭಕೋರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net