ಮದಗಜನಿಗೆ ಬೆಳ್ಳಿ ಕಿರೀಟ; ಶ್ರೀಮುರಳಿ ಬ್ರಿಗೇಡ್​ನಿಂದ ಬಿಡುಗಡೆಗೆ ತಯಾರಿ

Madagaja
Published on

ಬೆಂಗಳೂರು: ಬಿಡುಗಡೆಗೆ ಇನ್ನೊಂದು ವಾರವೂ ಇಲ್ಲ, ಇನ್ನೂ ಶ್ರೀಮುರಳಿ ಅಭಿನಯದ ‘ಮದಗಜ’ ಸೆನ್ಸಾರ್ ಆಗಿಲ್ಲವಲ್ಲ ಎಂಬ ಆತಂಕ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಇದೀಗ ಆ ಆತಂಕ ದೂರವಾಗಿದ್ದು, ಶನಿವಾರ ಚಿತ್ರದ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಿದೆ. ಡಿಸೆಂಬರ್ 03ರಂದು ‘ಮದಗಜ’ ಬಿಡುಗಡೆಯಾಗುತ್ತಿದ್ದು, ಗ್ರಾಂಡ್ ಆಗಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮತ್ತು ಶ್ರೀಮುರಳಿ ಬ್ರಿಗೇಡ್ ಎಂಬ ಅಭಿಮಾನಿಗಳ ಸಂಘ ತಯಾರಿ ನಡೆಸಿದೆ. ಚಿತ್ರವು ಮೆಜೆಸ್ಟಿಕ್ ಪ್ರದೇಶದ ಅನುಪಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಅಂದು ಚಿತ್ರಪ್ರದರ್ಶನಕ್ಕೆ ಆಗಮಿಸುವ ಶ್ರೀಮುರಳಿಗೆ 50 ಸಾವಿರದ ಸೇಬಿನ ಹಾರ ಹಾಕಲು ಅಭಿಮಾನಿಗಳ ಸಂಘ ತಯಾರಿ ನಡೆಸಿದೆ. ಅದರ ಜತೆಗೆ ಶ್ರೀಮುರಳಿಗೆ ಬೆಳ್ಳಿ ಕಿರೀಟ ತೊಡಿಸಿ, ಬೆಳ್ಳಿ ಗದೆಯನ್ನು ಉಡುಗೊರೆಯನ್ನಾಗಿ ನೀಡಲಾಗುತ್ತದೆ.

ಅಂದು ಚಿತ್ರಮಂದಿರದ ಎದುರು ಶ್ರೀಮುರಳಿಯ 72 ಅಡಿಯ ಎರಡು ಕಟೌಟ್ ನಿಲ್ಲಿಸಲಾಗುತ್ತಿದ್ದು, ಬೆಳಗ್ಗಿನ ಮತ್ತು ಮಧ್ಯಾಹ್ನದ ಪ್ರದರ್ಶನಕ್ಕೆ ಬರುವ ಪ್ರೇಕ್ಷಕರಿಗೆ ತಿಂಡಿ, ಊಟ ಮತ್ತು ಸ್ವೀಟ್ ಹಂಚಿಕೆ ಮಾಡಲಾಗುತ್ತದೆ. ಶ್ರೀಮುರಳಿ ಫೋಟೋ ಇರುವ 1000 ‘ಮದಗಜ’ ಟಿ-ಶರ್ಟ್​ಗಳನ್ನು ಮಾಡಿಸಲಾಗಿದ್ದು, ಅಭಿಮಾನಿಗಳಿಗೆ ಉಚಿತವಾಗಿ ಹಂಚಲಾಗುತ್ತದೆ. ಅಷ್ಟೇ ಅಲ್ಲ, ಇದು ಶ್ರೀಮುರಳಿ ಅಭಿನಯದ 22ನೇ ಚಿತ್ರವಾಗಿರುವುದರಿಂದ 22 ಕೆಜಿ ತೂಕದ ಕೇಕ್ ಕತ್ತರಿಸುವುದರ ಜತೆಗೆ, 22 ಸಾವಿರ ರೂ. ಮೌಲ್ಯದ ಪಟಾಕಿಯನ್ನು ಚಿತ್ರಮಂದಿರದ ಎದುರು ಸುಡಲಾಗುತ್ತದಂತೆ. ಇನ್ನು, ‘ಮದಗಜ’ ಚಿತ್ರವು ಕರ್ನಾಟಕದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ಮಹೇಶ್ ಕುಮಾರ್. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಚಿತ್ರವು ಕನ್ನಡವಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ಡಬ್ ಆಗಿದೆ. ಆದರೆ, ಡಿ.3ರಂದು ಬರೀ ಕನ್ನಡ ಅವತರಣಿಕೆ ಬಿಡುಗಡೆಯಾಗುತ್ತಿದೆ. ಅಂದು ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಡಿ.10ರಂದು ‘ಮದಗಜ’ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net