

ಚೆನ್ನೈ: ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ತಮಿಳು ನಟ ಸಿದ್ಧಾರ್ಥ್ ಸಹ ಒಬ್ಬರು. ಯಾವುದೇ ವಿಷಯವಾಗಲೀ, ಸಿದ್ಧಾರ್ಥ್ ತಮ್ಮದೊಂದು ಅಭಿಪ್ರಾಯವನ್ನು ಮಂಡಿಸುತ್ತಾರೆ.
ಈಗ್ಯಾಕೆ ಈ ವಿಷಯವೆಂದರೆ, ಸಿದ್ಧಾರ್ಥ್ ಅವರ ಈ ನಡೆಯಿಂದಾಗಿ ಅವರಿಗೆ ಹೊಸದೊಂದು ಬಿರುದು ಸಿಕ್ಕಿದೆಯಂತೆ. ಉತ್ತರ ಭಾರತದ ಜನ ಅವರನ್ನು ದಕ್ಷಿಣದ ಸ್ವರಾ ಭಾಸ್ಕರ್ ಎಂದು ಗುರುತಿಸುತ್ತಿದ್ದಾರಂತೆ. ಹಾಗಂತ ಸ್ವತಃ ಸಿದ್ಧಾರ್ಥ್ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಸಿದ್ಧಾರ್ಥ್ ತರಹ ಸ್ವರಾ ಭಾಸ್ಕರ್ ಸಹ ತಮ್ಮ ರಾಜಕೀಯ ನಿಲುವುಗಳನ್ನು ಆಗಾಗ ಸ್ಪಷ್ಟಪಡಿಸುತ್ತಿರುತ್ತಾರೆ ಮತ್ತು ಅದೇ ಕಾರಣಕ್ಕೆ ಅವರು ಹಲವರ ದ್ವೇಷವನ್ನು ಕಟ್ಟಿಕೊಂಡಿದ್ದಾರೆ. ತೀರಾ ಇತ್ತೀಚೆಗೆ, ಇಬ್ಬರೂ ಕಾಸ್ಟ್ಯೂಮ್ ಡಿಸೈನರ್ಗಳು ಇನ್ನು ಮುಂದೆ ಕಂಗನಾ ರಣಾವತ್ ಜತೆಗೆ ಕೆಲಸ ಮಾಡುವುದಿಲ್ಲ ಮತ್ತು ಅವರೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಎಂದಾಗ ಅವರ ಪರವಾಗಿ ಸ್ವರಾ ನಿಂತಿದ್ದರು. ಈ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಸಿದ್ಧಾರ್ಥ್ ಸಹ ಸ್ವರಾ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ಧಾರ್ಥ್, ಹಿಂದಿ ಮಾತನಾಡುವ ಜನ ನನ್ನನ್ನು ದಕ್ಷಿಣದ ಸ್ವರಾ ಎಂದು ಗುರುತಿಸುತ್ತಿದ್ದಾರೆ. ನನಗೆ ಈ ಬಗ್ಗೆ ಯಾವುದೇ ಬೇಸರ ಇಲ್ಲ. ಸ್ವರಾ ಆಗುವುದಕ್ಕೆ ನಾನು ಎಂದೆಂದಿಗೂ ಸಿದ್ಧ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ ಗೋವಾ ಸರ್ಕಾರ
ಇದಕ್ಕೆ ಪ್ರತಿಕ್ರಿಯಿಸಿರುವ ಸ್ವರಾ, ನೀನು ದಕ್ಷಿಣದ ಸ್ವರಾ ಅಲ್ಲ, ಭಾರತದ ಸಿದ್ಧಾರ್ಥ್ ಆಗಬೇಕು. ನಿನ್ನ ಬಗ್ಗೆ ಬಹಳ ಹೆಮ್ಮೆಯಿಂದೆ ಎಂದು ಉತ್ತರ ಕೊಟ್ಟಿದ್ದಾರೆ.