

ಪಣಜಿ: ಮುಂಬೈನಲ್ಲಿ ಯಾವಾಗ ಲಾಕ್ಡೌನ್ ಘೋಷಣೆಯಾಗಿ ಚಿತ್ರೀಕರಣ ಚಟುವಟಿಕೆಗಳಿಗೆ ಬ್ರೇಕ್ ಬಿತ್ತೋ, ಆಗ ಹಿಂದಿ ಧಾರಾವಾಹಿ ತಂಡಗಳು ಮೊದಲು ದೌಡಾಯಿಸಿದ್ದು ಗೋವಾಗೆ. ಅಲ್ಲಿನ ರೆಸಾರ್ಟ್ ಮತ್ತು ಫಾರ್ಮ್ಹೌಸ್ಗಳಲ್ಲಿ ಧಾರಾವಾಹಿಗಳ ಚಿತ್ರೀಕರಣ ಇಷ್ಟು ದಿನ ಅವ್ಯಾಹತವಾಗಿ ಸಾಗುತ್ತಿತ್ತು. ಇದೀಗ ಗೋವಾ ಸರ್ಕಾರ ಸಹ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದೆ.
ಇದನ್ನೂ ಓದಿ: ಶ್ರೇಯಸ್ ಮಂಜು ಅಭಿನಯದ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ
ಕಲರ್ಸ್, ಸೋನಿ, ಸ್ಟಾರ್ ಪ್ಲಸ್, ಜೀ ಮುಂತಾದ ವಾಹಿನಿಗಳಲ್ಲಿ ಪ್ರಸಾರವಾಗುವ ಒಂಬತ್ತು ಧಾರಾವಾಹಿಗಳ ತಂಡಗಳು ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಚಿತ್ರೀಕರಣ ನಡೆಸುತ್ತಿದ್ದವು. ಈ ಎಲ್ಲ ಧಾರಾವಾಹಿಗಳ ಚಿತ್ರೀಕರಣ ಮೊದಲು ಮುಂಬೈ ಸುತ್ತಮುತ್ತ ನಡೆಯುತ್ತಿತ್ತು. ಆದರೆ, ಮುಂಬೈನಲ್ಲಿ ಲಾಕ್ಡೌನ್ ಹೇರಿದ ಹಿನ್ನೆಲೆಯಲ್ಲಿ ಈ ಎಲ್ಲ ತಂಡಗಳು ಗೋವಾಗೆ ಶಿಫ್ಟ್ ಆಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡವು.
ಗುಮ್ ಹೇ ಕಿಸೀಕಿ ಪ್ಯಾರ್ ಮೇ, ಆಪ್ಕಿ ನಜ್ರೋನ್ ನೇ ಸಮ್ಜಾ, ಕುಂಕುಮ್ ಭಾಗ್ಯ, ಶೌರ್ಯ ಔರ್ ಅನೋಖಿ ಕೀ ಕಹಾನಿ, ಅಪ್ನಾ ಟೈಮ್ ಭೀ ಆಯೇಗಾ ಮುಂತಾದ ಧಾರಾವಾಹಿಗಳ ಚಿತ್ರೀಕರಣ ಗೋವಾದ ಹಲವು ಕಡೆ ನಡೆಯುತ್ತಿತ್ತು. ದೊಡ್ಡದೊಡ್ಡ ವಿಲ್ಲ, ರೆಸಾರ್ಟ್ ಮತ್ತು ಫಾರ್ಮ್ಹೌಸ್ಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ನಡೆಯುತ್ತಿದ್ದರಿಂದ ಯಾರೂ ಸಹ ಚಿತ್ರೀಕರಣಕ್ಕೆ ತಡೆ ಒಡ್ಡಿರಲಿಲ್ಲ.
ಆದರೆ, ಗೋವಾದಲ್ಲಿ ಹೆಚ್ಚುತ್ತಿರುವ ಕರೊನಾ ಪ್ರಕರಣಗಳಿಗೆ ಬ್ರೇಕ್ ಹಾಕುವುದಕ್ಕೆ ಎಂಟರ್ಟೈನ್ಮೆಂಟ್ ಸೊಸೈಟಿ ಆಆಫ್ ಗೋವಾ, ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನಿರಾಕರಿಸಿದೆ. ಇದನ್ನು ಅನುಮೋದಿಸಿರುವ ಗೋವಾ ಸರ್ಕಾರ, ಚಿತ್ರೀಕರಣ ಮಾಡುವಂತಿಲ್ಲ ಎಂದು ಹೇಳಿದೆ. ಈಗ ಎಲ್ಲ ಚಿತ್ರತಂಡದವರು ಚಿತ್ರೀಕರಣವನ್ನು ನಿಲ್ಲಿಸಿದೆ. ಎಲ್ಲ ಧಾರಾವಾಹಿ ತಂಡಗಳ ಹತ್ತಿರವೂ ಒಂದಿಷ್ಟು ದಿನಗಳ ಬ್ಯಾಂಕಿಂಗ್ ಇರುವುದರಿಂದ, ಸದ್ಯ ಯಾವುದೇ ಧಾರಾವಾಹಿ ಸಹ ಅರ್ಧದಲ್ಲೇ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತಿದೆ.