ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು 'ಡವ್ ಮಾಸ್ಟರ್' ಚಿತ್ರದ ಟ್ರೈಲರ್​

Dove Master
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ ಸಿನಿಮಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಸಿನಿಮಾಗಳ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಇನ್ನೊಂದು ಹೊಸ ಚಿತ್ರದ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ಟ್ರೈಲರ್​ ಸಹ ಬಿಡುಗಡೆ ಮಾಡಿದರು. ಆ ಚಿತ್ರದ ಹೆಸರು 'ಡವ್​ ಮಾಸ್ಟರ್​'.

'ಡವ್ ಮಾಸ್ಟರ್' ಚಿತ್ರವು ನಾಯಿ ಹಾಗೂ ಮನುಷ್ಯನ ಸಂಬಂಧದ ನಡುವಿನ ಕಥೆ ಇರುವ ಚಿತ್ರ. ಚಿತ್ರದಲ್ಲಿ ತಬಲ ನಾಣಿ, ಶಕೀಲಾ, ಕುರಿ ಪ್ರತಾಪ್, ಮಿತ್ರ, ನವೀನ್ ಪಡೀಲ್, ಪಂಕಜ ಮುಂತಾದವರು ಅಭಿನಯಸಿದ್ದು, ರಾಕಿ ಎಂಬ ಶ್ವಾನವು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಇನ್ನು, ಚಿತ್ರವನ್ನು ಚಾಂದ್​ ಪಾಷ ಮತ್ತು ರೋಷನ್​ ನಿರ್ಮಿಸಿದ್ದು, ಆರ್ಯ ನಿರ್ದೇಶನ ಮಾಡಿದ್ದಾರೆ.

ಹಾಡುಗಳು ಮತ್ತು ಟ್ರೈಲರ್​ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, 'ಇದು ನಾಯಿ ಹಾಗೂ ಮನುಷ್ಯನ ಸಂಬಂಧದ ಕುರಿತಾದ ಕಥೆ ಎಂದು ಕೇಳಿ ಸಂತೋಷವಾಯಿತು. ಪ್ರಾಣಿಗಳಲ್ಲೇ ನಿಯತ್ತು ಹೆಚ್ಚು. ಅದರಲ್ಲೂ ನಾಯಿಗೆ ನಿಯತ್ತಿನ ಪ್ರಾಣಿ ಎನ್ನುತ್ತೇವೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಎಲ್ಲರೂ ಈ ಚಿತ್ರ ನೋಡುವ ಮೂಲಕ ಪ್ರೋತ್ಸಾಹಿಸಿ' ಎಂದು ಸಿದ್ದರಾಮಯ್ಯ ಹಾರೈಸಿದರು.

ನಾಣಿ ಅಭಿನಯದ ಚಿತ್ರಕ್ಕೆ ಆರ್ಯ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಅವರೊಂದು ಕಥೆ ಹೇಳಿದ್ದಾರೆ. 'ಆರ್ಯ ಹೇಳಿದ ಕಥೆ ಬಹಳ ಇಷ್ಟವಾಯಿತು. ನಾಯಿ ಹಾಗೂ ನನ್ನ ನಡುವಿನ ಬಾಂಧವ್ಯದ ಸನ್ನಿವೇಶಗಳನ್ನು ನಿರ್ದೇಶಕರು ಮನಮುಟ್ಟುವಂತೆ ತೋರಿಸಿದ್ದಾರೆ. ರಾಕಿ (ನಾಯಿ) ನನಗಿಂತ ಚೆನ್ನಾಗಿ ನಟಿಸಿದೆ ಅಂತ ಹೇಳಬಹುದು' ಎನ್ನುತ್ತಾರೆ ತಬಲ ನಾಣಿ.

'ಡವ್​ ಮಾಸ್ಟರ್​' ಚಿತ್ರಕ್ಕೆ ಶಕೀಲ್​ ಅಹ್ಮದ್​ ಅವರ ಸಂಗೀತ ಮತ್ತು ಕಿರಣ್​ ಕುಮಾರ್​ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net