

ಬೆಂಗಳೂರು: ಶ್ವೇತಾ ಶ್ರೀವಾತ್ಸವ್ ಒಂದರಹಿಂದೊಂದು ಚಿತ್ರಗಳಲ್ಲಿ ಬಿಜಿಯಾಗುತ್ತಿದ್ದಾರೆ. ಮಗಳ ಲಾಲನೆ-ಪಾಲನೆಗಾಗಿ ಒಂದಿಷ್ಟು ಸಮಯ ಚಿತ್ರರಂಗದಿಂದ ದೂರವಿದ್ದ ಅವರು, ‘ಹೋಪ್’ ಎನ್ನುವ ಚಿತ್ರದ ಮೂಲಕ ವಾಪಸ್ಸಾದರು. ಆ ಚಿತ್ರ ಬಿಡುಗಡೆ ಆಗುವುದಕ್ಕೆ ಮುಂಚೆಯೇ, ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ನಲ್ಲಿ ನಟಿಸಿದರು. ಅದು ತೆರೆಗೆ ಬರುವ ಮುನ್ನವೇ ಇನ್ನೊಂದು ಹೊಸ ಚಿತ್ರದಲ್ಲಿ ಶ್ವೇತಾ ನಟಿಸುತ್ತಿದ್ದಾರೆ.
ಶ್ವೇತಾ ಈ ಬಾರಿ ಒಪ್ಪಿರುವ ಚಿತ್ರದ ಹೆಸರು ‘ಚಿಕ್ಕಿಯ ಮೂಗುತಿ’. ಈ ಚಿತ್ರವನ್ನು ದೇವಿಕಾ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ ಸಹ ಅವರದ್ದೇ. ಇದೊಂದು ಹಳ್ಳಿಕಥೆಯಾಗಿದ್ದು, ಬಾಲ್ಯವಿವಾಹ ತಡೆಯುವ ಕುರಿತ ಚಿತ್ರ ಇದಂತೆ.
‘ನಿಜಕ್ಕೂ ಇಂಥದ್ದೊಂದು ಪಾತ್ರ ಮಾಡುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಬಹಳ ಗಟ್ಟಿ ಕಥೆ ಮತ್ತು ಪಾತ್ರ ಸಿಕ್ಕಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಮುಖ್ಯಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ರಂಗಾಯಣ ರಘು, ತಾರಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ರಂಗಭೂಮಿಯ ಸಾಕಷ್ಟು ನಟ-ನಟಿಯರು ಈ ಚಿತ್ರದಲ್ಲಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ಶ್ವೇತಾ.