ಸೌದಿ ಅರೇಬಿಯಾಗೆ ಹೋಗಿದ್ರು ಶ್ವೇತಾ ಪ್ರಸಾದ್​ ... ಯಾಕೆ ಗೊತ್ತಾ?

Shwetha Prasad
Published on

ಬೆಂಗಳೂರು: ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೇರೆಬೇರೆ ದೇಶದ ಸೆಲೆಬ್ರಿಟಿಗಳನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಆರು ದಿನಗಳ ಕಾಲ ಸಕಲ ಸೌಕರ್ಯದ ಜೊತೆಗೆ ಸೌದಿ ಅರೇಬಿಯಾದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಹಾಗೆ ಪ್ರಾಧಿಕಾರದ ಆಹ್ವಾನದ ಮೇರೆಗೆ ಸೌದಿ ಅರೇಬಿಯಾಗೆ ಹೋಗಿ ಬಂದ ಮೊದಲ ಕನ್ನಡದ ನಟಿ ಎಂಬ ಹೆಗ್ಗಳಿಕೆಗೆ ಶ್ವೇತಾ ಪ್ರಸಾದ್​ ಪಾತ್ರರಾಗಿದ್ದಾರೆ.

‘ಶ್ರೀರಸ್ತು ಶುಭಮಸ್ತು’, ‘ರಾಧಾ ರಮಣ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದವರು ಶ್ವೇತಾ ಪ್ರಸಾದ್. ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಮೂಲಕ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. 'ರಾಧಾ ಮಿಸ್' ಎಂದೇ ಫೇಮಸ್​ ಆಗಿರುವ ಶ್ವೇತಾ ಪ್ರಸಾದ್ ಅವರನ್ನು ಇತ್ತೀಚೆಗೆ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಆಹ್ವಾನಿಸಿ ಆತಿಥ್ಯ ನೀಡಿದೆ.

ಆಹ್ವಾನಕ್ಕೆ ಪಾತ್ರರಾಗಿ ಪುರಸ್ಕರಿಸಿ, ಆರು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದ ಶ್ವೇತಾ ಪ್ರಸಾದ್​, 'ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನಿಸಲ್ಪಟ್ಟಿದ್ದು ಬಹಳ ಖುಷಿ ನೀಡಿದೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರಳಾದವರಲ್ಲಿ ಮೊದಲಿಗಳು ನಾನು. ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳು ಮರೆಯಲಾಗದು. ಒಂದು ಹೊಸ ಅನುಭವವನ್ನು ಈ ಪ್ರವಾಸ ನೀಡಿದೆ. ಅಲ್ಲಿನ ರಿಯಾಧ್​, ಅಲುಲಾ ಮತ್ತು ಜೆಡ್ಡಾ ನಗರಗಳಿಗೆ ಭೇಟಿ ನೀಡಿ ಬಂದೆ. ಅವರ ಆಹಾರ, ಆತಿಥ್ಯ ಎಲ್ಲವೂ ತುಂಬಾ ಚೆನ್ನಾಗಿತ್ತು. ಟ್ರಾಫಿಕ್ ನಿಯಂತ್ರಣಕ್ಕೆ 'ದಿ ಲೈನ್' ಎಂಬ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಅಲ್ಲಿ ಬುರ್ಖಾ ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು ಆರಾಮಾಗಿ ಓಡಾಡಿಕೊಂಡು ಇದ್ದಾರೆ. ಜೊತೆಗೆ ಭಾರತೀಯರ ಮೇಲೆ ಅಲ್ಲಿನವರು ವಿಶೇಷವಾದ ಪ್ರೀತಿಯನ್ನು ಹೊಂದಿದ್ದಾರೆ' ಎಂದು ಪ್ರವಾಸ ಸಂತಸದ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಿರುತೆರೆಯಿಂದ ಬ್ರೇಕ್ ಪಡೆದಿರುವ ಶ್ವೇತಾ ಪ್ರಸಾದ್, ಸದ್ಯ ‘ಅರಿಹ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net