

‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ್ದ ನಟಿ ಶುಭಾ ಪೂಂಜ, ಇಂದಿಗೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿಭಿನ್ನ ಮತ್ತು ವಿಶೇಷವಾದ ಪಾತ್ರಗಳ ಮೂಲಕ ಅಭಿಮಾನಿಗಳನ್ನು ತಣಿಸುತ್ತಿದ್ದಾರೆ. ನಟನೆ ಜತೆಗೆ ಸಿನಿಮಾ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಸಿನಿಮಾರಂಗದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ, ಮದುವೆ ಬಗ್ಗೆ ಒಂದ ಸಣ್ಣ ಸುಳಿವನ್ನೂ ಹೊರಬಿಟ್ಟಿರಲಿಲ್ಲ ಶುಭಾ. ಹೋದಲ್ಲಿ, ಬಂದಲ್ಲಿ ಮದುವೆ ವಿಚಾರ ಪದೇಪದೆ ಎದುರಾಗುತ್ತಿತ್ತಾದರೂ, ಅದಕ್ಕೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಆ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ. ಮದುವೆ ಮತ್ತು ಆರಿಸಿಕೊಂಡ ಹುಡುಗನ ಬಗ್ಗೆ ‘ವಿಜಯವಾಣಿ’ ಜತೆಗೆ ಶುಭಾ ಮನದಾಳ ಬಿಚ್ಚಿಟ್ಟಿದ್ದಾರೆ.
| ಮಂಜು ಕೊಟಗುಣಸಿ ಬೆಂಗಳೂರು
* ಹೆಸರು ಸುಮಂತ್, ಮಂಗಳೂರು ಮೂಲ ..
ಶುಭಾ ಪೂಜಾ ಮದುವೆ ಎಂದ ತಕ್ಷಣ, ಅಭಿಮಾನಿಗಳಲ್ಲಿ ನೆಚ್ಚಿನ ನಟಿಯ ಪತಿ ಹೇಗಿರಲಿದ್ದಾನೆ ಎಂಬ ಸಹಜ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಆ ಮದುವೆಯ ಅಧಿಕೃತ ವಿಚಾರವನ್ನು ಶುಭಾ ಹೊರಗೆಡವಿದ್ದಾರೆ. ‘ನಾನು ಮೂಲತಃ ಮಂಗಳೂರಿನವಳು. ನಾನು ಇಷ್ಟಪಟ್ಟ ಹುಡುಗ ಸುಮಂತ್ ಮಹಾಬಲ ಸಹ ಮಂಗಳೂರಿನವರು. ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್ ಉಪಾಧ್ಯಕ್ಷರಾಗಿದ್ದಾರೆ. ಇಲ್ಲೇ ಬೆಂಗಳೂರಿನಲ್ಲಿಯೇ ಗ್ಯಾಸ್ ಏಜೆನ್ಸಿಸ್ ಉದ್ಯಮವನ್ನೂ ಮಾಡುತ್ತಿದ್ದಾರೆ’ ಎಂದು ಭಾವಿ ಪತಿಯ ಬಗ್ಗೆ ಪರಿಚಯ ಮಾಡಿಕೊಡುತ್ತಾರೆ ಶುಭಾ.
* ಶೀಘ್ರದಲ್ಲಿ ನಿಶ್ಚಿತಾರ್ಥ; ಡಿಸೆಂಬರ್‌ನಲ್ಲಿ ಮದುವೆ..
ಹಾಗಾದರೆ ಈ ಜೋಡಿಯ ನಿಶ್ವಿತಾರ್ಥ ಮತ್ತು ಮದುವೆ ಯಾವಾಗ? ಆ ಬಗ್ಗೆಯೂ ಶುಭಾ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಈ ಮೊದಲೇ ಘೋಷಣೆ ಮಾಡಬೇಕೆಂಬ ಪ್ಲ್ಯ್ಲಾನ್‌ನಲ್ಲಿದ್ದ ಶುಭಾಗೆ ಲಾಕ್‌ಡೌನ್ ಅಡ್ಡಿಯಾಗಿತ್ತು. ಇನ್ನು ಹೆಚ್ಚುದಿನ ಮುಚ್ಚಿಡುವುದು ಬೇಡ ಎಂಬ ಕಾರಣಕ್ಕೆ ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಡಿಸೆಂಬರ್‌ನಲ್ಲಿ ಈ ಜೋಡಿಯ ಮದುವೆ ಆಗಲಿದೆ.