

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ನಿರ್ದೇಶಿಸುತ್ತಿರುವ ಪತ್ರಕರ್ತ ಯತಿರಾಜ್, ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಪ್ರೇಮಕಥೆಯನ್ನು ಶುರು ಮಾಡಿದ್ದಾರೆ. ಅದೇ 'ಸಂಜು'. ವಿಶೇಷವೆಂದರೆ, ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಮಗಳು ಶ್ರಾವ್ಯ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ.
ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸುತ್ತಿರುವ 'ಸಂಜು ... ಅಗಮ್ಯ ಪಯಣಿಗ' ಎಂಬ ಚಿತ್ರವು ಇತ್ತೀಚೆಗೆ ಪ್ರಾರಂಭವಾಗಿದ್ದು, ಇದೇ ತಿಂಗಳ 14ರಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ನಾಯಕನಾಗಿ ಮನ್ವೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ 'ಅ್ಯಂಗರ್' ಅನ್ನುವ ಸಿನಿಮಾದಲ್ಲಿ ನಟಿಸಿದ್ದ ಅವರಿಗೆ 'ಸಂಜು' ಎರಡನೇ ಚಿತ್ರ. ನಾಯಕನ ತಾಯಿಯಾಗಿ ಸಂಗೀತಾ, ನಾಯಕಿಯ ತಂದೆಯಾಗಿ ಬಲರಾಜ ವಾಡಿ ನಟಿಸುತ್ತಿದ್ದಾರೆ. ಜತೆಗೆ ಕುರಿ ರಂಗ, ಶಂಕರ್ ಭಟ್, ಕಾತ್ಯಾಯಿನಿ, ಮಿಥಾಲಿ ಮುಂತಾದವರು ನಟಿಸುತ್ತಿದ್ದಾರೆ.
'ಪ್ರೀತಿಯ ಚೌಕಟ್ಟಿನೊಳಗೆ ಸಂಬಂಧಗಳ ಪಯಣ. ಪಯಣದ ದಾರಿಯಲ್ಲಿ ಬದುಕಿನ ಮೌಲ್ಯಗಳ ಅನಾವರಣ' ಎಂದು ಹೇಳುವ ಮೂಲಕ ಈ ಚಿತ್ರವನ್ನು ವ್ಯಾಖ್ಯಾನಿಸುತ್ತಾರೆ ಯತಿರಾಜ್. ಚಿತ್ರದ ಕುರಿತು ಮಾತನಾಡುವ ಅವರು, 'ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳ ತಲ್ಲಣಗಳಿವೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತಲಿನ ಹಸಿರಿನ ಪರಿಸರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕಾಗಿ ಮೂರ್ನಾಡುವಿನಲ್ಲಿ ಬಸ್ ಸ್ಟಾಪ್ ಮತ್ತು ಟೀ ಶಾಪಿನ ಸೆಟ್ ಕೂಡ ಹಾಕಲಾಗುತ್ತಿದೆ' ಎಂದು ಹೇಳಿದರು.
ಶ್ರಾವ್ಯ ಚಿತ್ರದಲ್ಲಿ ಸರಸ್ವತಿ ಎಂಬ ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. 'ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ. ಇದೊಂಥರ ವಿಭಿನ್ನ ಪ್ರಯೋಗ' ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು ಶ್ರಾವ್ಯ.