ಚಿತ್ರ ಹೇಗಿರುತ್ತದೆ ಎಂದು ಪರಿಚಯಿಸುವುದಕ್ಕೆ 25 ನಿಮಿಷಗಳ ಶೋರೀಲ್​!

Ashwa - Final
Published on

ಬೆಂಗಳೂರು: ಒಂದು ಚಿತ್ರ ಹೇಗಿರುತ್ತದೆ ಎಂದು ತೋರಿಸುವುದಕ್ಕೆ ಚಿತ್ರತಂಡದವರು ಪ್ರೋಮೋ, ಟೀಸರ್​ ಮತ್ತು ಟ್ರೇಲರ್​ಗಳನ್ನು ಬಿಡುಗಡೆ ಮಾಡುವುದು ಸಹಜ. ಆದರೆ, ಇಲ್ಲೊಂದು ಹೊಸಬರ ತಂಡವು ತಮ್ಮ ಚಿತ್ರ ಹೇಗಿರುತ್ತದೆ ಎಂದು ತಿಳಿಸುವುದಕ್ಕೆ ಸುಮಾರು 25 ನಿಮಿಷಗಳ ಶೋರೀಲ್​ ಮಾಡಿಟ್ಟುಕೊಂಡಿದೆ.

ಅಂಥದ್ದೊಂದು ಕೆಲಸ ಮಾಡಿರುವುದು 'ಅಶ್ವ' ಎಂಬ ಹೊಸಬರ ತಂಡ. ಇಲ್ಲಿ ನಟ-ನಿದೇರ್ಶಕ-ನಿರ್ಮಾಪಕ ಎಲ್ಲರೂ ಹೊಸಬರಾದರೂ, ಕಲಾವಿದರು ಮಾತ್ರ ಸಾಕಷ್ಟು ನುರಿತವರು ಎನ್ನುವುದು ವಿಶೇಷ. ಈ ಚಿತ್ರದ ಮೂಲಕ ವಿವಿನ್​ ಎಂಬ ಹೊಸ ನಾಯಕ ಕನ್ನಡ ಚಿತ್ರರಂಗ ಪರಿಚಯವಾಗುತ್ತಿದ್ದಾರೆ. ಹಾಗೆಯೇ, ಕಳೆದ ಒಂದು ದಶಕದಿಂದ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಸಾಯಿರಾಮ್​ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭೌಷಣೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.

ಅಂದಹಾಗೆ, ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ ಎಂದು ಚಿತ್ರತಂಡ ಹೇಳಿಕೊಳ್ಳುತ್ತದೆ. ಚಿತ್ರದಲ್ಲಿ ಮಸ್ತ್ ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವು ಇದ್ದರೂ, ಸಿನಿಮಾದಲ್ಲಿ ಶೇಕಡ ಎರಡರಷ್ಟು ಮಾತ್ರ ಬರಲಿದ್ದು, ಚಿತ್ರವು ಬೇರೆ ರೀತಿಯಲ್ಲಿ ಇರುತ್ತದಂತೆ. ಹಾಗಾದರೆ, ಚಿತ್ರದಲ್ಲೇನು ಇರುತ್ತದೆ ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸುವುದಕ್ಕೆ ಹೋಗಿಲ್ಲ.

ಚಿತ್ರದಲ್ಲಿ ವಿವಿನ್​ ಜತೆಗೆ ಸುಹಾಸಿನಿ, ಸಾಯಿಕುಮಾರ್, ಪ್ರಕಾಶ್‌ ರೈ, ಸಾಧು ಕೋಕಿಲ, ರಂಗಾಯಣ ರಘು, ಭವಾನಿ ಪ್ರಕಾಶ್, ಚಿಕ್ಕಣ್ಣ, ಗಿರಿ, ನಂದಗೋಪಾಲ್, ನಾಗೇಂದ್ರ ಅರಸ್, ಬಲ ರಾಜವಾಡಿ, ಯಶ್‌ ಶೆಟ್ಟಿ, ಪವನ್‌ ಪಚ್ಚಿ, ರಿಚ್ಚಿ ಮುಂತಾದವರು ನಟಿಸುತ್ತಿದ್ದಾರೆ. ಇನ್ನು ವಿವಿನ್​ಗೆ ಸೂಕ್ತ ನಾಯಕಿಯ ಹುಡುಕಾಟ ನಡೆಯುತ್ತಿದೆ.

ಬರೀ ಕಲಾವಿದರಷ್ಟೇ ಅಲ್ಲ, ತಾಂತ್ರಿಕ ವಿಭಾಗದಲ್ಲಿ ನುರಿತ ತಂತ್ರಜ್ಱರು ಕೆಲಸ ಮಾಡುತ್ತಿರುವುದು ಈ ಚಿತ್ರದ ವಿಶೇಷ. ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದು, 'ಒಲವೇ ಮಂದಾರ' ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ರವಿಕುಮಾರ್​ ಸನಾ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.

ಬೆಂಗಳೂರು, ಸಕಲೇಶಪುರ, ಮಂಗಳೂರು, ಅಮೃತಸರ, ಪಣಜಿ, ಹೈದರಬಾದ್ ಮತ್ತು ಕಾಕಿನಾಡದ ಸುಂದರ ತಾಣಗಳಲ್ಲಿ ನವೆಂಬರ್ ಕೊನೆವಾರದಿಂದ ಚಿತ್ರೀಕರಣ ನಡೆಸಲು ತಂಡವು ತಯಾರಿ ಮಾಡಿಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net