ಧಾರಾವಾಹಿ ಶೂಟಿಂಗ್ ಮುಂದಕ್ಕೆ; ಜೂನ್‌ನಿಂದ ಹೊಸ ಎಪಿಸೋಡ್‌ಗಳು

Small Screen Shooting Final
Published on

ಧಾರಾವಾಹಿಗಳ ಚಿತ್ರೀಕರಣದ ವಿಷಯವಾಗಿ ಮತ್ತೊಂದ್ರ ಸುದ್ದಿ ಬಂದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸೋಮವಾರದಿಂದ (ಮೇ 11) ಹೊಸ ಕಂತುಗಳ ಚಿತ್ರೀಕರಣ ಪ್ರಾರಂಭವಾಗಿ, ಆ ಕಂತುಗಳ ಪ್ರಸಾರ ಮೇ 18ರಿಂದ ಶುರುವಾಗಬೇಕಿತ್ತು. ಆದರೆ, ಇದೀಗ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಮೇ 25ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಕುರಿತು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಕಿರುತೆರೆಯನ್ನೇ ನಂಬಿಕೊಂಡು ಬದುಕುತ್ತಿರುವ ಹಲವು ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಆದಷ್ಟು ಬೇಗ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ, ಮೇ 11ರಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಅನುಮತಿ ನೀಡಿತ್ತು. ಅದರ ಮೇರೆಗೆ, ಇದುವರೆಗಿನ ಕಥೆಯನ್ನು ಒಂದು ವಾರದಲ್ಲಿ ಪ್ರಸಾರ ಮಾಡಿ, ಮೇ 18ರಿಂದ ಹೊಸ ಕಂತುಗಳನ್ನು ಪ್ರಸಾರ ಮಾಡುವ ಬಗ್ಗೆ ಎಲ್ಲಾ ಚಾನಲ್‌ಗಳು ಚಿಂತನೆ ನಡೆಸಿದ್ದವು.

ಈ ಕುರಿತು ಇಂದು ಸಭೆ ನಡೆಸಿದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯು, ಹಲವು ವಿಷಯಗಳನ್ನು ಗಣನೆಗೆ ತೆಗೆದುಕೊಂಡು, ಚಿತ್ರೀಕರಣವನ್ನು ಮೇ 25ರಿಂದ ಪ್ರಾರಂಭಿಸಬೇಕು ಎಂದು ಹೇಳಿದೆ. ಆರೋಗ್ಯ ದೃಷ್ಟಿಯಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಅಲ್ಲಿಗೆ ಮೇ 25ರಿಂದ ಹೊಸ ಕಂತುಗಳ ಚಿತ್ರೀಕರಣ ಶುರುವಾದರೆ, ಜೂನ್ ಒಂದರ ಸೋಮವಾರದಿಂದ ಆ ಕಂತುಗಳ ಪ್ರಸಾರ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net