

ಕೆಲವೇ ವರ್ಷಗಳ ಹಿಂದೆ ‘ನವರಸ ನಾಯಕ’ ಜಗ್ಗೇಶ್ ಅವರು ಓವರ್‌ವೇಯ್ಟ ಇದ್ದಿದ್ದು, ಅದರಿಂದ ಸಾಕಷ್ಟು ನೋವು ಅನುಭವಿಸಿದ್ದು, ಕೊನೆಗೆ ತೂಕ ಕಡಿಮೆ ಮಾಡಿಕೊಂಡು ಮತ್ತೊಮ್ಮೆ ಮಿಂಚಿದ್ದು ಎಲ್ಲರಿಗೂ ಗೊತ್ತೇ ಇದೆ. ಜಗ್ಗೇಶ್ ಅವರು ಈ ಅವಧಿಯಲ್ಲಿ ಸುಮಾರು 24 ಕೆಜಿ ತೂಕ ಇಳಿಸಿಕೊಂಡಿದ್ದರಂತೆ.
ಎಲ್ಲಾ ಸರಿ, ಅವರು ಇಷ್ಟು ತೂಕ ಇಳಿಸುವುದಕ್ಕೆ ಕಾರಣ ಮತ್ತು ಸ್ಫೂರ್ತಿ ಏನು ಎಂಬ ಪ್ರಶ್ನೆ ಬರುವುದು ಸಹಜ. ಈ ಬಗ್ಗೆ ಜಗ್ಗೇಶ್ ಅವರು ಎಲ್ಲೂ ಪೂರ್ಣ ಪ್ರಮಾಣದಲ್ಲಿ ಹೇಳಿಕೊಂಡಿರಲಿಲ್ಲ. ಈಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಮನಬಿಚ್ಚಿ ಮಾತಾಡಿದ್ದಾರೆ.
‘94 ಕೆಜಿ ಇದ್ದವನು 70 ಕೆಜಿ ಆಗಿದ್ದೇನೆ. ಕೆಟ್ಟ ಸಮಯ ಮುಗಿಯಿತು. ಆಗ ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ ಪಡೆಯುತ್ತಿದ್ದೆ. ಆಗ ನನ್ನ ತೂಕ ಕಂಟ್ರೋಲ್ ತಪ್ಪಿತ್ತು. ರಾಯರ ದಯೆಯಿಂದ, ನನ್ನ ಮಡದಿ ಪರಿಮಳ ಡಯಟ್ ಸಲಹೆ ಪಾಲಿಸಿ ಇಂದು ನಾನೇ ರಾಜ, ಮಂತ್ರಿ, ಸೇನಾಧಿಪತಿ ... ಆರೋಗ್ಯವೇ ಸಕಲೈಶ್ವರ್ಯ ಬದುಕಿಗೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಸದ್ಯ ಲಾಕ್‌ಡೌನ್ ಸಮಯವನ್ನು ಮನೆಯಲ್ಲಿ ಕಳೆಯುತ್ತಿರುವ ಜಗ್ಗೇಶ್ ಅವರು, ಅದು ಮುಗಿದ ನಂತರ ‘ತೋತಾಪುರಿ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.