

ಬೆಂಗಳೂರು: ಕಳೆದ ಒಂದೂವರೆ ತಿಂಗಳಿಂದ ಧಾರಾವಾಹಿಗಳ ಹಳೆಯ ಎಪಿಸೋಡ್ಗಳನ್ನು ನೋಡಿ, ಹೊಸ ಕಂತುಗಳು ಯಾವಾಗಪ್ಪಾ ಎಂದು ಕೇಳುತ್ತಿದ್ದವರಿಗೆಲ್ಲಾ ಉತ್ತರ ಸಿಕ್ಕಿದೆ. ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಮೇ 11ರ ಸೋಮವಾರದಿಂದ ಚಿತ್ರೀಕರಣ ಪ್ರಾರಂಭಿಸಬಹುದಾಗಿದೆ. ಇನ್ನು ಚಿತ್ರೀಕರಣವಾದ ಹೊಸ ಕಂತುಗಳು ಮೇ 18ರಿಂದ ಪ್ರಸಾರವಾಗುವ ಸಾಧ್ಯತೆ ಇದೆ.
ಚಲನಚಿತ್ರ ಮತ್ತು ಕಿರುತೆರೆಯನ್ನು ಅವಲಂಬಿಸಿರುವ ಅನೇಕ ಕುಟುಂಬಗಳ ಬದುಕು ದುಸ್ಥಿತಿಯಲ್ಲಿದ್ದು, ಇತರೆ ಉದ್ಯಮಗಳ ಪುನರಾರಂಭಕ್ಕೆ ಅನುವು ಮಾಡಿಕೊಟ್ಟಂತೆ, ಸಿನಿಮಾ ಮತ್ತು ಟಿವಿ ಧಾರಾವಾಹಿಗಳ ನಿರ್ವಣಕ್ಕೆ ಅನುಮತಿ ನೀಡಬೇಕು ಎಂದು ಇತ್ತೀಚೆಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಮತ್ತು ನಟಿ ತಾರಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆೆ ಸ್ಪಂದಿಸಿರುವ ಸರ್ಕಾರ, ಮೇ 11ರಿಂದ ಕಡಿಮೆ ಜನರನ್ನಿಟ್ಟುಕೊಂಡು, ಧಾರಾವಾಹಿಗಳ ಚಿತ್ರೀಕರಣಕ್ಕೆ ಮಾತ್ರ ಅನುಮತಿ ಕೊಟ್ಟಿದೆ.
ಇದನ್ನೂ ಓದಿ: ಮಹೇಶ್ ಬಾಬು ಆಯ್ತು; ಈಗ ಸಲ್ಮಾನ್ ಸರದಿ
ರಿಯಾಲಿಟಿ ಶೋಗಳಿಗಿಲ್ಲ ಅವಕಾಶ: ಇನ್ನು ಬರೀ ಧಾರಾವಾಹಿಗಳ ಚಿತ್ರೀಕರಣಕ್ಕೆ ಮಾತ್ರ ಅನುಮತಿ ನೀಡಿರುವುದಕ್ಕೆ ಕಾರಣಗಳಿವೆ. ಪ್ರಮುಖವಾಗಿ ರಿಯಾಲಿಟಿ ಶೋ ಮತ್ತು ಚಲನಚಿತ್ರಗಳಿಗೆ ಹೋಲಿಸಿದರೆ, ಧಾರಾವಾಹಿಗಳ ಚಿತ್ರೀಕರಣವನ್ನು ಕಡಿಮೆ ಸಂಖ್ಯೆಯ ಜನರನ್ನಿಟ್ಟುಕೊಂಡು ಮಾಡಬಹುದು. ಆದರೆ, ರಿಯಾಲಿಟಿ ಶೋ ಮತ್ತು ಚಲನಚಿತ್ರಗಳು ಹಾಗಲ್ಲ. ಅಲ್ಲಿ ಸಾಕಷ್ಟು ಜನ ಒಂದೆಡೆ ಸೇರಬೇಕಾಗುತ್ತದೆ. ಹಾಗಾಗಿ, ಮೊದಲಿಗೆ ಧಾರಾವಾಹಿಗಳ ಚಿತ್ರೀಕರಣಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಕರೊನಾ ಸೋಂಕು ಹರಡುವುದು ತಹಬದಿಗೆ ಬಂದ ನಂತರ ಮುಂದಿನ ದಿನಗಳಲ್ಲಿ ರಿಯಾಲಿಟಿ ಶೋ ಮತ್ತು ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತದೆ.
ಹೊಸ ಸವಾಲುಗಳು: ಚಿತ್ರೀಕರಣ ಶುರುವಾದರೂ, ಪ್ರೇಕ್ಷಕರನ್ನು ಟಿವಿ ಮುಂದೆ ಕರೆದು ಕೂರಿಸುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ, ಈಗಾಗಲೇ ಹಳೆಯದನ್ನೆಲ್ಲಾ ಜನ ಮರೆತು ಹೋಗಿರುತ್ತಾರೆ. ಇನ್ನು ಹೊಸ ಕಂತುಗಳಿಗೆ ಅವರು ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯಬೇಕು. ಬಹುತೇಕ ಎಲ್ಲಾ ಚಾನಲ್ನವರು ಮೇ 11ರಿಂದ ಇದುವರೆಗೂ ಆಗಿರುವ ಕಥೆಯನ್ನು ಸಂಕ್ಷಿಪ್ತವಾಗಿ ತೋರಿಸಿ, ಮೇ 18ರಿಂದ ಧಾರಾವಾಹಿಗಳ ಹೊಸ ಕಂತುಗಳನ್ನು ಪ್ರಸಾರ ಮಾಡುವುದಕ್ಕೆ ಮುಂದಾಗುತ್ತಿವೆ.
ಸಾಕಷ್ಟು ಮಿತಿಗಳು: ಇನ್ನು ಹಲವು ಮಿತಿಗಳ ನಡುವೆ ಚಿತ್ರೀಕರಣ ಮಾಡಬೇಕಿದೆ ಎನ್ನುತ್ತಾರೆ ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು. ‘ನಮ್ಮೆದುರು ಹಲವು ಮಿತಿಗಳಿವೆ. ಕಡಿಮೆ ಕಲಾವಿದರನ್ನಿಟ್ಟುಕೊಂಡು, ಅದರಲ್ಲೂ ಹಿರಿಯ ಕಲಾವಿದರನ್ನು ದೂರ ಇಟ್ಟು, ಎಲ್ಲರಿಗೂ ಇಷ್ಟವಾಗುವಂತಹ ಕಂಟೆಂಟ್ ಕೊಡಬೇಕಿದೆ. ಇದು ಬರಹಗಾರರಿಗೆ ದೊಡ್ಡ ಸವಾಲು. ಹಲವು ಮಿತಿಗಳ ನಡುವೆ ಎಷ್ಟು ಚೆನ್ನಾಗಿ ಮಾಡುವುದಕ್ಕೆ ಸಾಧ್ಯವೋ ಆ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಅವರು.