

ಬೆಂಗಳೂರು: ಕನ್ನಡದಲ್ಲಿ ಹಲವು ವೆಬ್ಸೀರೀಸ್ಗಳ ನಿರ್ಮಾಣ ಸದ್ದಿಲ್ಲದೆ ನಿರ್ಮಾಣ ಹಂತದಲ್ಲಿದ್ದು, ಯಾವ ವೆಬ್ಸೀರೀಸ್, ಯಾವ ಓವರ್ ದಿ ಟಾಪ್ನಲ್ಲಿ (ಓಟಿಟಿ) ಬಿಡುಗಡೆಯಾಗುತ್ತದೆ ಎಂದು ಹೇಳುವುದು ಕಷ್ಟ.
ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆಯೊಂದು ವೆಬ್ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದೆ. ಅದೇ 'ನಿಮಗೊಂದು ಸಿಹಿಸುದ್ದಿ'. ಕನ್ನಡದ ಮಟ್ಟಿಗೆ ಇದು ಹೊಚ್ಚಹೊಸ ಕಾನ್ಸೆಪ್ಟ್ ಎಂಬ ಕಾರಣಕ್ಕೆ ಈಗಾಗಲೇ ಗಮನಸೆಳೆದಿದೆ.
ಎಂಟು ಎಪಿಸೋಡುಗಳಿರುವ ಈ ವೆಬ್ಸಿರೀಸ್ಗೆ ಇತ್ತೀಚೆಗೆ ಮುಹೂರ್ತವಾಗಿದ್ದುಮ ಚಿತ್ರೀಕರಣ ಪ್ರಾರಂಭವಾಗಿದೆ. ಪರ್ಪಲ್ ರಾಕ್ ಎಂಟರ್ಟೈನರ್ಸ್ ಮತ್ತು ಗೋಲ್ಡ್ ಚೈನ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ತಯಾರಾಗುರ್ತಿರುವ ಈ ವೆಬ್ ಸರಣಿಗೆ ಗೋವಾದ ಶಾಂತದುರ್ಗ ದೇವಸ್ಥಾನದಲ್ಲಿ ನವೆಂಬರ್ 5ರಂದು ನಡೆಯಿತು.
'ಭಿನ್ನ' ಚಿತ್ರದ ಗೆಲುವಿನ ನಂತರ ಮತ್ತು ಬಿಡುಗಡೆಗೆ ತಯಾರಾಗಿರುವ 'ಡಿಯರ್ ಸತ್ಯ' ಸಿನಿಮಾದ ಬಳಿಕ ಪರ್ಪಲ್ ರಾಕ್ ಎಂಟರ್ಟೈನರ್ಸ್ ಸಂಸ್ಥೆಯು 'ನಿಮಗೊಂದು ಸಿಹಿಸುದ್ದಿ' ವೆಬ್ಸೀರೀಸ್ ನಿರ್ಮಿಸುತ್ತಿದೆ. ರಘು ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಾವ್ಯ ಶೆಟ್ಟಿ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.
'ಊರ್ವಿ' ಸಿನಿಮಾದ ಆನಂದ್ ಸುಂದರೇಶ ಛಾಯಾಗ್ರಹಣ ಮಾಡುತ್ತಿದ್ದು, ಉಪೇಂದ್ರ ಅವರ 'ಟೋಪಿವಾಲ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ಸಿರೀಸ್ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.