ಮುಗೀತು 'ಕಡಲತೀರದ ಭಾರ್ಗವ' ಚಿತ್ರದ ಶೂಟಿಂಗ್​

KTB - Final
Published on

ಕಳೆದ ವರ್ಷವೇ ಪ್ರಾರಂಭವಾಗಿತ್ತು 'ಕಡಲತೀರದ ಭಾರ್ಗವ' ಎಂಬ ಚಿತ್ರದ ಶೂಟಿಂಗ್. ಒಂದು ಟೀಸರ್​ ಸಹ ಬಿಡುಗಡೆಯಾಗಿತ್ತು. ಫೆಬ್ರವರಿ ಹೊತ್ತಿಗೆ ಬಹುತೇಕ ಚಿತ್ರೀಕರಣ ಸಹ ಮುಗಿದಿತ್ತಂತೆ. ಇನ್ನೈದು ದಿನಗಳ ಪ್ಯಾಚ್​ವರ್ಕ್​​ ಮುಗಿದರೆ ಕುಂಬಳಕಾಯಿ ಒಡೆಯಬಹುದು ಎಂದು ತುದಿಗಾಲಲ್ಲಿ ನಿಂತಿದ್ದ ಚಿತ್ರತಂಡದವರ ಯೋಚನೆಗಳೆಲ್ಲಾ ತಲೆಕೆಳಗಾಯ್ತು. ಅದಕ್ಕೆ ಕಾರಣ ಲಾಕ್​ಡೌನ್​.

ಮಾರ್ಚ್​ನಲ್ಲಿ ಕರೊನಾ ಹಾವಳಿ ಹೆಚ್ಚಾದ ಕಾರಣ ಲಾಕ್​ಡೌನ್​ ಘೋಷಣೆಯಾಗಿ, ಅದು ಮುಗಿದು, ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ನಾಲ್ಕೈದು ತಿಂಗಳುಗಳೇ ಬೇಕಾದವು. ಇದೀಗ ಬಾಕಿ ಇದ್ದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

'ಕಡಲತೀರದ ಭಾರ್ಗವ' ಎಂಬ ಹೆಸರು ಕೇಳುತ್ತಿದ್ದಂತೆ, ಮನಸ್ಸಿಗೆ ಮೊದಲು ಬರುವ ಹೆಸರು ಶಿವರಾಮ ಕಾರಂತರದ್ದು. ಈ ಚಿತ್ರಕ್ಕೂ ಕಾರಂತರಿಗೂ ಯಾವುದೇ ಸಂಬಂಧವಿಲ್ಲವಂತೆ. ಇದೊಂದು ಸೈಕಲಾಜಿಕಲ್​ ಥ್ರಿಲ್ಲರ್​ ಚಿತ್ರವಾಗಿದ್ದು, ಭರತ್​, ಭಾರ್ಗವ ಮತ್ತು ಇಂಪನ ಎಂಬ ಪಾತ್ರಗಳ ಸುತ್ತ ಸುತ್ತುತ್ತದಂತೆ.

ಈ ಪೈಕಿ ಭಾರ್ಗವ ಎಂಬ ಪಾತ್ರ ಪರಶುರಾಮನ ಪ್ರತಿರೂಪವಾಗಿರುವುರಿಂದ ಮತ್ತು ಆತ ಕರಾವಳಿಯವನಾದ್ದರಿಂದ, ಚಿತ್ರಕ್ಕೆ 'ಕಡಲತೀರದ ಭಾರ್ಗವ' ಎಂಬ ಹೆಸರನ್ನು ಇಡಲಾಗಿದೆ.

ಚಿತ್ರದಲ್ಲಿ ಭರತ್​ ಗೌಡ, ಭರತ್​ ಎನ್ನುವ ಪಾತ್ರ ಮಾಡಿದ್ದಾರೆ. ವರುಣ್​ ರಾಜು, ಭಾರ್ಗವನ ಪಾತ್ರದ ಮಾಡಿದ್ದರು. ಇನ್ನು 'ಬಿಗ್​ ಬಾಸ್​' ಖ್ಯಾತಿಯ ಶ್ರುತಿ ಪ್ರಕಾಶ್​​, ಇಲ್ಲಿ ಇಂಪನಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಿಕ್ಕಂತೆ 'ಸಿದ್ಲಿಂಗು' ಶ್ರೀಧರ್​, ರಾಘವ್​ ನಾಗ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಜಗ್ಗೇಶ್​ ಅಭಿನಯದ '8 ಎಂಎಂ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪನ್ನಗ ಸೋಮಶೇಖರ್​, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಅನಿಲ್​ ಸಿಜಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರೆ, ಕೀರ್ತನ್​ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net