ಶೋಕಿವಾಲನ ಮದುವೆ ಸಂಭ್ರಮ: ವಿಜಯವಾಣಿ ಸಿನಿಮಾ ವಿಮರ್ಶೆ

Fiml Review
Published on
  • ಚಿತ್ರವಿಮರ್ಶೆ: ಶೋಕಿವಾಲ
  • ನಿರ್ದೇಶನ: ಜಾಕಿ
  • ನಿರ್ಮಾಣ: ಟಿ.ಆರ್. ಚಂದ್ರಶೇಖರ್
  • ತಾರಾಗಣ: ಅಜೇಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಮುನಿ, ಗಿರಿ ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

ತನ್ನ ಹಳ್ಳಿಯಲ್ಲ, ಸುತ್ತಮುತ್ತಲ ಯಾವೊಂದು ಹಳ್ಳಿಯ ಯಾವ ಹುಡುಗಿಗೂ ಕಾಳು ಹಾಕದೆ ಬಿಡುವವನಲ್ಲ ಅವನು. ಆದರೆ, ಅವನ ಅದೃಷ್ಟ ನೋಡಿ. ಎಷ್ಟೇ ಕಾಳು ಹಾಕಿದರೂ, ಯಾವೊಬ್ಬ ಹುಡುಗಿಯೂ ಅವನಿಗೆ ಬೀಳುವುದಿಲ್ಲ. ಹೀಗಿರುವಾಗಲೇ ಊರ ಗೌಡರ ಮಗಳ ಮೇಲೆ ಅವನಿಗೆ ಮನಸ್ಸಾಗುತ್ತದೆ. ಅವನು ಭಯಂಕರ ಶೋಕಿವಾಲ ಆದರೂ, ಅವಳಿಗೆ ಇಷ್ಟವಾಗುತ್ತಾನೆ. ಒಂದು ಹಂತದಲ್ಲಿ ಇಬ್ಬರೂ ಓಡಿ ಹೋಗಿ ಮದುವೆ ಆಗುತ್ತಾರೆ. ಮುಂದಾ? ಈ ಪ್ರಶ್ನೆಗೆ ಉತ್ತರಿಸಿಬಿಟ್ಟರೆ, ಚಿತ್ರದ ಬಗ್ಗೆ ಹೇಳುವುದಕ್ಕೆ ಇನ್ನೇನೂ ಉಳಿಯುವುದಿಲ್ಲ.

ಅದೊಂದು ಹಳ್ಳಿ. ಆ ಹಳ್ಳಿಯಲ್ಲೊಬ್ಬ ಯಾವುದೇ ಕೆಲಸ ಮಾಡದ ಶೋಕಿವಾಲ. ಅವನದೊಂದು ಪ್ರೇಮಕಥೆ. ಈ ತರಹದ ಚಿತ್ರಗಳು ಕನ್ನಡಿಗರಿಗೆ ಹೊಸದಲ್ಲ. ‘ಅಧ್ಯಕ್ಷ’, ‘ಆಯೋಗ್ಯ’ ಸೇರಿದಂತೆ ಈ ರೀತಿಯ ಕೆಲವು ಚಿತ್ರಗಳು ಈಗಾಗಲೇ ಬಂದಿವೆ. ಅದೇ ಸಾಲಿನಲ್ಲಿ ಇನ್ನೊಂದು ಚಿತ್ರ ‘ಶೋಕಿವಾಲ’. ಕಥೆ ಅದೇ ಆದರೂ, ಬೇರೆ ರೀತಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಜಾಕಿ ಮಾಡಿದ್ದಾರೆ. ಅದಕ್ಕಾಗಿ ಅವರು ಹಲವು ಪಾತ್ರಗಳನ್ನು ಬಳಸಿಕೊಂಡಿದ್ದಾರೆ. ಎಲ್ಲ ಪಾತ್ರಗಳ ಮೂಲಕ ಇಷ್ಟಿಷ್ಟೇ ಕಥೆಯನ್ನು ಮುಂದುವರೆಸುವ ಪ್ರಯತ್ನ ಮಾಡಿದ್ದಾರೆ. ಒಬ್ಬರು ನಿಲ್ಲಿಸಿದ್ದರಿಂದ, ಇನ್ನೊಬ್ಬರು ಮುಂದುವರೆಸುತ್ತಾರೆ. ಈ ಮೂಲಕ ಚಿತ್ರವನ್ನು ತೆರೆದಿಡುತ್ತಾ ಹೋಗುತ್ತಾರೆ. ಈ ತಂತ್ರದ ಜತೆಗೆ ಚಿತ್ರಕಥೆಯ ಬಗ್ಗೆಯೂ ಅವರೊಂದಿಷ್ಟು ಒತ್ತು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಏನೋ ಬೇರೆ ಪ್ರಯತ್ನ ಮಾಡಿದರೂ, ಹಳೆಯ ಫಾಮುಲ ಬಿಟ್ಟು ಅವರು ಹೊರಬರುವುದಿಲ್ಲ. ನಾಯಕನ ಇಂಟ್ರೋ ಹಾಡು, ಟಪ್ಪಾಂಗುಚ್ಚಿ, ಎಣ್ಣೆ ಹಾಡು, ಒಂದಿಷ್ಟು ಫೈಟುಗಳು ... ಇವೆಲ್ಲವೂ ಇಲ್ಲೂ ಮುಂದುವರೆದಿದೆ.

ಚಿತ್ರದ ಮೊದಲಾರ್ಧ ಏನೂ ವಿಶೇಷ ಸಂಭವಿಸುವುದಿಲ್ಲ. ದ್ವಿತೀಯಾರ್ಧದಲ್ಲಿ ಚಿತ್ರಕ್ಕೊಂದು ವೇಗ ಸಿಗುತ್ತದಾದರೂ, ಅಷ್ಟರಲ್ಲಿ ಪ್ರೇಕ್ಷಕರ ಆಸಕ್ತಿ ಕೊಂಚ ಕಡಿಮೆಯಾಗಿರುತ್ತದೆ. ‘ಪ್ರಪಂಚದಲ್ಲಿ ಎಲ್ಲಾ ಖಾಯಿಲೆಗಳಿಗೂ ನಗುವೊಂದೇ ಔಷಧಿ ...’ ಎಂದು ಚಿತ್ರದ ಟ್ರೇಲರ್​ನಲ್ಲೇ ನಿರ್ದೇಶಕರು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅದರಂತೆ ಚಿತ್ರದುದ್ದಕ್ಕೂ ನಗಿಸುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಅವರೆಷ್ಟು ಯಶಸ್ವಿಯಾಗುತ್ತಾರೆ ಎನ್ನುವುದು ಪ್ರೇಕ್ಷಕರಿಗೆ ಬಿಟ್ಟಿದ್ದು. ಆದರೂ ಚಿತ್ರ ನೋಡಿಸಿಕೊಂಡು ಹೋಗುವಂತೆ ಮಾಡುವುದು ಕಲಾವಿದರು. ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಅರುಣಾ ಬಾಲರಾಜ್, ತಬಲ ನಾಣಿ, ಗಿರಿ ಮುಂತಾದವರು. ಅಜೇಯ್ ರಾವ್ ಬಹಳ ದಿನಗಳ ನಂತರ ಇಂಥದ್ದೊಂದು ಲವಲವಿಕೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ಮುದ್ದಾಗಿ ಕಾಣಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net