ಶಿವರಾಜಕುಮಾರ್​ ಅಭಿನಯದ 123ನೇ ಚಿತ್ರದ ಹೆಸರೇನು? ಇಲ್ಲಿದೆ ಉತ್ತರ

Shivarajakumar - Shivappa
Published on

ಬೆಂಗಳೂರು: 'ಟಗರು' ಚಿತ್ರದ ನಂತರ ಶಿವರಾಜ್​ಕುಮಾರ್​ ಮತ್ತು 'ಡಾಲಿ' ಧನಂಜಯ್​ ಜತೆಯಾಗಿ ಅಭಿನಯಿಸುತ್ತಿರುವ ಇನ್ನೊಂದು ಚಿತ್ರ ಇಂದು ಪ್ರಾರಂಭವಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಚಿತ್ರವು ಇಂದು ಪ್ರಾರಂಭವಾಗಿದೆ.

ಇದು ಶಿವರಾಜಕುಮಾರ್​ ಅಭಿನಯದ 123ನೇ ಚಿತ್ರವಾಗಿದ್ದು, ಈ ಚಿತ್ರಕ್ಕೆ ಹೆಸರೇನು ಇಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈ ಪ್ರಶ್ನೆಗೆ ಶಿವರಾಜಕುಮಾರ್​ ಅವರೇ ಉತ್ತರ ಕೊಟ್ಟಿದ್ದು, ಚಿತ್ರಕ್ಕೆ 'ಶಿವಪ್ಪ' ಎಂಬ ಹೆಸರನ್ನು ಇಡಲಾಗಿದೆ.

'ಶಿವಪ್ಪ' ಚಿತ್ರವನ್ನು ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್​ ಮಿಲ್ಟನ್​ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಇದವರ ಮೂರನೆಯ ಚಿತ್ರವಾಗಿದ್ದು, ಇದಕ್ಕೂ ಮುನ್ನ ಅವರು 'ಅಟ್ಟಹಾಸ' ಮತ್ತು 'ಪೊಗರು' ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದರು. ಇದೀಗ ಈ ಚಿತ್ರದ ಮೂಲಕ ಅವರು ಕನ್ನಡದಲ್ಲಿ ನಿರ್ದೇಶಕರಾಗಿದ್ದಾರೆ.

'ಶಿವಪ್ಪ' ಕುರಿತು ಮಾತನಾಡುವ ಶಿವರಾಜಕುಮಾರ್​, 'ಇದು ನನ್ನ ಚಿತ್ರ ಎನ್ನುವುದಕ್ಕಿಂತ ವಿಜಯ್​ ಮಿಲ್ಟನ್​ ಅವರ ಚಿತ್ರ ಎಂದು ಹೇಳುವುದು ಸರಿಯಾಗುತ್ತದೆ. ಈ ಚಿತ್ರದಲ್ಲಿ ನನಗೊಂದು ಒಳ್ಳೆಯ ಪಾತ್ರವಿದೆ. ಇದೊಂದು ಮನರಂಜನೆಯ ಚಿತ್ರವಾಗಿದ್ದು ಒಂದೊಳ್ಳೆಯ ಸಂದೇಶವೂ ಇದೆ. ತಪ್ಪು ಅಂತ ಗೊತ್ತಿದ್ದರೂ, ತಪ್ಪು ಮಾಡೋಕೆ ಹೋಗಬಾರದು ಎಂಬ ಸಂದೇಶವು ಈ ಚಿತ್ರದಲ್ಲಿದ್ದು, ನನ್ನದು ಒಂದರ್ಥದಲ್ಲಿ ಮುಗ್ಧ ಮತ್ತು ರಗೆಡ್​ ಪಾತ್ರವಿದೆ' ಎನ್ನುತ್ತಾರೆ.

ಇನ್ನು 'ಟಗರು' ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಅವರು, 'ಎರಡೂ ಚಿತ್ರಗಳಿಗೆ ಯಾವುದೇ ಸಂಬಂಧವಿಲ್ಲ ಮತ್ತು ಇಲ್ಲಿ ಧನಂಜಯ್​ ವಿಲನ್​ ಸಹ ಅಲ್ಲ . ಇಲ್ಲಿ ಚಿತ್ರಕಥೆ ವಿಭಿನ್ನವಾಗಿದ್ದು, ಕಥೆ ಏನಿರಬಹುದು ಎಂದು ಊಹಿಸುವುದು ಕಷ್ಟ' ಎನ್ನುತ್ತಾರೆ ಅವರು.

ಸದ್ಯಕ್ಕೆ ಚಿತ್ರಕ್ಕೆ 'ಶಿವಪ್ಪ' ಎಂಬ ಹೆಸರಿಡಲಾಗಿದ್ದು, ಟ್ಯಾಗ್​ಲೈನ್​ ಇನ್ನಷ್ಟೇ ಇಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net