

ಬೆಂಗಳೂರು: ‘ಇದು ಎರಡು ತಲೆಮಾರಿನ ಕಥೆ ...’- ಹಾಗಂತ ‘ಶಿವಾಜಿ ಸುರತ್ಕಲ್ 2’ ಚಿತ್ರದ ಬಗ್ಗೆ ಹೇಳಿದ್ದರು ನಿರ್ದೇಶಕ ಆಕಾಶ್ ಶ್ರೀವತ್ಸ. ಅದಕ್ಕೆ ಸರಿಯಾಗಿ ಅವರು ನಾಜರ್ ಮತ್ತು ರಮೇಶ್ ಅವರ ಫೋಟೋ ಬಿಡುಗಡೆ ಮಾಡಿ, ಚಿತ್ರದಲ್ಲಿ ನಾಜರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದಿದ್ದರು. ಈಗ ಅವರು ವರಸೆ ಬದಲಾಯಿಸಿದ್ದಾರೆ. ಎರಡಲ್ಲ ಇದು ಮೂರು ತಲೆಮಾರಿನ ಕಥೆ ಎನ್ನುತ್ತಿದ್ದಾರೆ. ಚಿತ್ರದಲ್ಲಿ ರಮೇಶ್ಗೆ ಮಗಳೂ ಇರುತ್ತಾಳಂತೆ. ಮೊದಲ ಭಾಗ ನೋಡಿರುವವರು, ಅದು ಹೇಗೆ ಸಾಧ್ಯ ಎಂದು ಕೇಳಬಹುದು. ಏಕೆಂದರೆ, ಚಿತ್ರದಲ್ಲಿ ರಮೇಶ್ ಅವರ ಗರ್ಭಿಣಿ ಹೆಂಡತಿಯ ಕೊಲೆಯಾಗಿರುತ್ತದೆ. ಹೀಗಿರುವಾಗ ಈ ಮಗು ಸಿಕ್ಕಿದ್ದೆಲ್ಲಿ? ಎಂಬ ರಹಸ್ಯಕ್ಕೆ ನೇರವಾಗಿ ಚಿತ್ರಮಂದಿರದಲ್ಲೇ ಉತ್ತರ ಕೊಡುವುದಾಗಿ ಅವರು ಹೇಳುತ್ತಾರೆ.
ಅಂದಹಾಗೆ, ‘ಶಿವಾಜಿ ಸುರತ್ಕಲ್ 2’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತೀಚೆಗೆ ಮುರುಡೇಶ್ವರ, ಹೊನ್ನಾವರ ಸುತ್ತಲಿನ ಕರಾವಳಿ ಪ್ರದೇಶದಲ್ಲಿ ಮುಗಿದಿದೆ. ಬೆಂಗಳೂರಿನಲ್ಲಿ ಸದ್ಯದಲ್ಲೇ ಇನ್ನೊಂದು ಹಂತದ ಚಿತ್ರೀಕರಣ ನಡೆಯಲಿದೆ. ರಮೇಶ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಘು ರಾಮನಕೊಪ್ಪ, ಶೋಭರಾಜ್, ಶ್ರೀನಿವಾಸ ಪ್ರಭು ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ಛಾಯಾಗ್ರಾಹಕ ಮಧು ಅಂಬಟ್ ಅವರ ಮಗ ದರ್ಶನ್ ಅಂಬಟ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜಿಸುತ್ತಿದ್ದಾರೆ. ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಈ ಚಿತ್ರದ ನಿರ್ವಪಕರು. ಇನ್ನು, ಶಿವರಾತ್ರಿ ಪ್ರಯುಕ್ತ ಇಂದು ‘ಶಿವಾಜಿ ಸುರತ್ಕಲ್ 2’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಲಿದೆ.