

ಕೊಚ್ಚಿ: ತೆಲುಗು ಟಿವಿ ಸಂದರ್ಶನವೊಂದರಲ್ಲಿ ಮಲಯಾಳಂ ನಟ ಶೈನ್ ಟಾಮ್ ಚಾಕೋ, ಕ್ಯಾಮೆರಾ ಮುಂದೆಯೇ ತಮ್ಮ ಬಟ್ಟೆಗಳನ್ನು ಬಿಚ್ಚಲು ಯತ್ನಿಸುವುದರೊಂದಿಗೆ ಮಹಿಳಾ ಆ್ಯಂಕರ್, ಕಕ್ಕಾಬಿಕ್ಕಿಯಾಗುವಂತೆ ಮಾಡಿದ ಪ್ರಸಂಗ ಜರುಗಿದೆ.
ತೆಲುಗಿನ ಆನ್ಲೈನ್ ಪೋರ್ಟಲ್ ಮನಾ ಸ್ಟಾರ್ಸ್ಗೆ ಸಿನಿಮಾ ಕುರಿತು ಸಂದರ್ಶನ ನೀಡುವಾಗ ಈ ವಿಲಕ್ಷಣ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಂಗಬಾಲಿ ನಿರ್ದೇಶಕ ಪವನ್ ಬಾಸಮಸೆಟ್ಟಿ ಮತ್ತು ಶೈನ್ ಒಟ್ಟಿಗೆ ಸಂದರ್ಶನಕ್ಕೆ ಆಗಮಿಸಿದ್ದರು. ಒಂದು ಹಂತದಲ್ಲಿ ಆ್ಯಂಕರ್, ಶೈನ್ ಧರಿಸಿದ್ದ ಶರ್ಟ್ ಕುರಿತು ಕಾಮೆಂಟ್ ಮಾಡಿದಾಗ, ದಿಢೀರನೇ ಶೈನ್ ಅವರು ಶರ್ಟ್ ಬಟನ್ ಬಿಚ್ಚಲು ಆರಂಭಿಸಿದರು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಪವನ್ ತಡೆಯಲು ಯತ್ನಿಸಿದರು. ಆದರೆ, ಆ್ಯಂಕರ್ ಶೈನ್ರನ್ನು ಹುರಿದುಂಬಿಸುವ ಮೂಲಕ ಕಾಲೆಳೆಯಲು ಯತ್ನಿಸಿದರು.
ಯಾವಾಗ ಶೈನ್ ಪ್ಯಾಂಟ್ ಬಿಚ್ಚಲು ಮೇಲೆ ಏಳಲು ಪ್ರಯತ್ನಿಸುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಆ್ಯಂಕರ್, ತಮ್ಮ ಮಾತನ್ನು ಹಿಂಪಡೆದು ಶೈನ್ ಅವರನ್ನು ತಡೆದರು. ಈ ವೇಳೆ ಶೈನ್ ಸುಮ್ಮನೆ ಕುಳಿತುಕೊಂಡರು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ.
ಮಲಯಾಳಂ ಸಿನಿಮಾ ರಂಗದಲ್ಲಿ ಖಳನಾಯಕನ ಪಾತ್ರಗಳಲ್ಲಿ ಮಿಂಚು ಹರಿಸಿರುವ ಶೈನ್, ಅನೇಕ ಸಂದರ್ಶನಗಳಲ್ಲಿ ಕೀಟಲೆಗಳನ್ನು ಮಾಡುವ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಲೇ ಇರುತ್ತಾರೆ. ಈ ವಿಡಿಯೋ ಅದಕ್ಕೆ ಸಾಕ್ಷಿಯಾಗಿದೆ. (ಏಜೆನ್ಸೀಸ್)