

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ, ಕಂಗನಾ ಬಿಟ್ಟರೆ ಸಾಕಷ್ಟು ಸುದ್ದಿಯಲ್ಲಿರುವ ಮತ್ತೊಬ್ಬ ಸೆಲೆಬ್ರಿಟಿ ಎಂದರೆ ಅದು ಹಿರಿಯ ನಿರ್ದೇಶಕ ಶೇಖರ್ ಕಪೂರ್. ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದು, ಬಾಲಿವುಡ್ನ ಪೊಳ್ಳುತನದ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಈಗ ಮತ್ತೊಮ್ಮೆ ಶೇಖರ್ ಕಪೂರ್, ಬಾಲಿವುಡ್ ಕುರಿತು ಮಾತನಾಡಿದ್ದಾರೆ.
ಅದಕ್ಕೆ ಕಾರಣ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್. ಇತ್ತೀಚೆಗಷ್ಟೇ ರೆಹಮಾನ್ ಅವರು, ಹೇಗೆ ಬಾಲಿವುಡ್ನಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಮಾತನಾಡಿದ್ದರು. ಅದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಲಾಗುತ್ತಿಲ್ಲ ಎಂದು ಸಹ ಹೇಳಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಶೇಖರ್ ಕಪೂರ್, 'ರೆಹಮಾನ್ ನಿಮ್ಮ ಸಮಸ್ಯೆ ಏನು ಗೊತ್ತಾ? ನೀವು ಆಸ್ಕರ್ ಪ್ರಶಸ್ತಿ ವಿಜೇತರು. ಒಮ್ಮೆ ಆ ಪ್ರಶಸ್ತಿ ಪಡೆದರೆ, ನಿಮ್ಮ ಕಥೆ ಮುಗೀತು. ಏಕೆಂದರೆ, ನೀವು ಬಾಲಿವುಡ್ಗಿಂಥ ದೊಡ್ಡದಾಗಿ ಬೆಳೆದುಬಿಟ್ಟಿದ್ದೀರಿ ಎಂದು ಪ್ರೂವ್ ಆದಂತೆ' ಎಂದು ಬರೆದುಕೊಂಡಿದ್ದಾರೆ.
ರೆಹಮಾನ್ ಅವರು 'ಸ್ಲಂಡಾಗ್ ಮಿಲಿಯನೇರ್'ಗೆ ಸಂಗೀತಕ್ಕೆ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ, ಆ ಪ್ರಶಸ್ತಿ ಪಡೆದ ಭಾರತದ ಮೊದಲ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆ ಚಿತ್ರದಲ್ಲಿನ 'ಜೈ ಹೋ' ಹಾಡಿಗೆ ಅತ್ಯುತ್ತಮ ಹಾಡು ಪ್ರಶಸ್ತಿ ಸಿಕ್ಕಿದರೆ, ಆ ಚಿತ್ರದ ಸಂಗೀತ ನಿರ್ದೇಶನಕ್ಕೆ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ಪ್ರಶಸ್ತಿಗೆ ಭಾಜನರಾದರು. ಅಲ್ಲಿಯವರೆಗೂ ಉತ್ತುಂಗದಲ್ಲಿದ್ದ ರೆಹಮಾನ್, ನಂತರದ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಸಂಗೀತ ನಿರ್ದೇಶನ ಮಾಡಿದ್ದು ಕಡಿಮೆಯೇ.
ತಮ್ಮ ಬಗ್ಗೆ ಶೇಖರ್ ಕಪೂರ್ ಬರೆದಿರುವ ಸಾಲುಗಳ ಬಗ್ಗೆ ಪ್ರತಿಕ್ರಿಯಿಸಿರುವ ರೆಹಮಾನ್, 'ಕಳೆದು ಹೋದ ಹಣ ಪುನಃ ಸಿಗುತ್ತದೆ. ಕಳೆದು ಹೋದು ಜನಪ್ರಿಯತೆ ಮತ್ತೆ ಸಿಗುತ್ತದೆ. ಆದರೆ, ಮತ್ತೆ ಸಿಗದಿರುವುದೆಂದರೆ ಅದು ಸಮಯ ಮಾತ್ರ. ನಾವು ಸಮಯ ಹಾಳು ಮಾಡಿಕೊಂಡು, ಈ ಬಗ್ಗೆ ಕೊರಗುತ್ತಾ ಕೂರಬಾರದು. ನಾವಿನ್ನೂ ಮಾಡುವುದು ಸಾಕಷ್ಟಿದೆ. ಆ ನಿಟ್ಟಿನಲ್ಲಿ ಮುಂದುವರೆಯೋಣ' ಎಂದು ಹೇಳಿಕೊಂಡಿದ್ದಾರೆ.