ನನ್ನ ಬಗ್ಗೆ ಹಲವಾರು ಕಥೆಗಳಿವೆ ... ಆ್ಯಕ್ಸಿಡೆಂಟ್ ಬಗ್ಗೆ ಶರ್ಮಿಳಾ ಹೇಳಿದ್ದೇನು?

Sharmila Mandre - Final
Published on

ಲಾಕ್‌ಡೌನ್ ಸಮಯದಲ್ಲಿ ಶರ್ಮಿಳಾ ಮಾಂಡ್ರೆ ಅಪಘಾತಕ್ಕೀಡಾಗಿದ್ದು, ಫ್ರಾಕ್ಚರ್​ ಮಾಡಿಕೊಂಡಿದ್ದು ಗೊತ್ತೇ ಇದೆ. ಈ ಸಂದರ್ಭದಲ್ಲಿ ಶರ್ಮಿಳಾ ಬಗ್ಗೆ ಹಲವು ಸುದ್ದಿಗಳು ಕೇಳಿ ಬಂದವು. ಪ್ರಮುಖವಾಗಿ, ಪಾರ್ಟಿ ಮಾಡಿ ಮನೆಗೆ ಹೋಗುವ ಸಂದರ್ಭದಲ್ಲಿ ಅಪಘಾತವಾಯಿತು ಎಂಬ ಸುದ್ದಿಯೊಂದು ಎಲ್ಲೆಡೆ ಕೇಳಿ ಬಂತು. ಆದರೆ, ತಾನು ಪಾರ್ಟಿಗೆ ಹೋಗಿರಲಿಲ್ಲ, ಹೊಟ್ಟೆನೋವು ಜಾಸ್ತಿಯಾದ್ದರಿಂದ ಆಸ್ಪತ್ರೆಗೆ ಹೋಗುವಾಗ ಹೀಗಾಯಿತು ಎಂದು ಶರ್ಮಿಳಾ ಟ್ವೀಟ್ ಮಾಡಿದ್ದರು. ಈ ಬಗ್ಗೆ ತನಿಖೆಯಾಗುತ್ತಿದೆಯಾದರೂ, ಇದುವರೆಗೂ ಸತ್ಯಾಂಶ ಹೊರಬಿದ್ದಿಲ್ಲ.

ಈಗ ಬಹಳ ಸಮಯದ ನಂತರ ಸ್ವತಃ ಶರ್ಮಿಳಾ ಮಾಂಡ್ರೆ ಟ್ವೀಟ್ ಮಾಡಿದ್ದಾರೆ. ಅಪಘಾತದ ಸಂದರ್ಭದಲ್ಲಿ ನೆರವಾದವರಿಗೆ ಥ್ಯಾಂಕ್ಸ್ ಹೇಳುವುದರ ಜತೆಗೆ, ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

‘ಪ್ರಮುಖವಾಗಿ ನನ್ನ ಕುಟುಂಬದವರು ಮತ್ತು ಸ್ನೇಹಿತರಿಗೆ ನನ್ನ ಥ್ಯಾಂಕ್ಸ್. ಅಷ್ಟೇ ಅಲ್ಲ, ನಾನು ಅಪಘಾತಕ್ಕೊಳಗಾಗಿದ್ದಾಗ, ಕಷ್ಟದ ಸಮಯದಲ್ಲಿದ್ದಾಗ ನನ್ನ ನೆರವಿಗೆ ಬಂದ ವ್ಯದ್ಯರಿಗೂ ಧನ್ಯವಾದಗಳು. ಈಗ ನಾನು ಹುಷಾರಾಗುತ್ತಿದ್ದೇನೆ ಮತ್ತು ಸಾಕಷ್ಟು ಸುಧಾರಿಸಿದ್ದೇನೆ’ ಎಂದು ತಮ್ಮ ಮೊದಲ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ ಶರ್ಮಿಳಾ.

ಇನ್ನು ತಮ್ಮ ಅಪಘಾತದ ಸುತ್ತ ಇರುವ ಊಹಾಪೋಹಗಳ ಬಗ್ಗೆ ಮಾತನಾಡಿರುವ ಅವರು, ‘ಅಪಘಾತದ ಸಂದರ್ಭದಲ್ಲಿ ನನ್ನ ಬಗ್ಗೆ ಹಲವಾರು ಊಹಾಪೋಹಗಳು ಎದ್ದಿದ್ದವು ಎಂದು ನನಗೆ ಗೊತ್ತಿದೆ. ನನಗೆ ಹಲವು ಫ್ರಾಕ್ಚರ್​‌ಗಳಾಗಿತ್ತು. ನಾನು ಮೊದಲು ಹುಷಾರಾಗಬೇಕು ಎಂಬ ಉದ್ದೇಶ ನನಗಿದ್ದರಿಂದ ಈ ಬಗ್ಗೆ ಏನೂ ಮಾತನಾಡಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, ಶರ್ಮಿಳಾ ಈಗ ಸುಧಾರಿಸಿಕೊಳ್ಳುತ್ತಿದ್ದು, ಲಾಕ್‌ಡೌನ್ ಮುಗಿದ ನಂತರ ಶೂಟಿಂಗ್‌ನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಮತ್ತು ತಮ್ಮದೇ ಸ್ವಂತ ನಿರ್ಮಾಣದ ‘ವೈತರಣಿ’ ಚಿತ್ರಗಳಲ್ಲಿ ಶರ್ಮಿಳಾ ಅಭಿನಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net