

ಶಿವಾನಂದ ತಗಡೂರು ಬೆಂಗಳೂರು
ಲಾಕ್ಡೌನ್ನಿಂದ ಚಿತ್ರರಂಗದ ಎಲ್ಲಾ ವಲಯಗಳಿಗೂ ಸಾಕಷ್ಟು ಸಮಸ್ಯೆಗಳಾಗಿವೆ. ಕ್ರಮೇಣ ಲಾಕ್ಡೌನ್ ತೆರವಾಗುತ್ತಿರುವುದರಿಂದ ಒಂದೊಂದೇ ವಲಯಗಳು ಸುಧಾರಿಸಿಕೊಳ್ಳುತ್ತಿವೆ. ಆದರೆ, ಲಾಕ್ಡೌನ್ ಸಂಪೂರ್ಣವಾಗಿ ತೆರವಾದ ನಂತರವೂ ಸಮಸ್ಯೆಗಳನ್ನು ಎದುರಿಸಲಿರುವ ಒಂದು ವಲಯವೆಂದರೆ ಅದು ಪ್ರದರ್ಶನ ವಲಯ.
ಕಳೆದ ಎರಡು ತಿಂಗಳುಗಳಿಂದ ಲಾಕ್ಡೌನ್ನಿಂದ ಚಿತ್ರಮಂದಿರಗಳೆಲ್ಲಾ ಬಂದ್ ಆಗಿವೆ. ಒಂದು ಪಕ್ಷ ಮುಂದಿನ ತಿಂಗಳುಗಳಲ್ಲಿ, ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕರೂ, ಜನ ಚಿತ್ರ ನೋಡಲು ಬರುತ್ತಾರೆ, ಚಿತ್ರಮಂದಿರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳುವುದು ಕಷ್ಟ. ಏಕೆಂದರೆ, ಪ್ರಮುಖವಾಗಿ ಸೋಂಕು ತಗಲುವ ಆತಂಕ ಜನರಲ್ಲಿ ಇರುವುದರಿಂದ, ಚಿತ್ರಮಂದಿರಗಳಿಗೆ ಮುಕ್ತವಾಗಿ ಬಂದು ಚಿತ್ರ ನೋಡುವುದಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ.
ಶಾಪಿಂಗ್ ಕಾಂಪ್ಲೆಕ್ಸ್ಗಳಾದರೆ ಅಚ್ಚರಿ ಇಲ್ಲ: ಈ ಪ್ರದರ್ಶನ ವ್ಯವಸ್ಥೆ ಕಾಲದಿಂದ ಕಾಲಕ್ಕೆ ಸಮಸ್ಯೆ ಎದುರಿಸುತ್ತಲೇ ಬಂದಿದೆ. ಕೇವಲ ಎರಡು ದಶಕಗಳ ಹಿಂದೆ ರಾಜ್ಯದಲ್ಲಿ ಚಿತ್ರಮಂದಿರಗಳು ಉಚ್ಛ್ರಾಯ ಸ್ಥಿತಿಯಲ್ಲಿತ್ತು. 1200ಕ್ಕೂ ಹೆಚ್ಚು ಚಿತ್ರಮಂದಿರಗಳು ರಾಜ್ಯದಲ್ಲಿದ್ದವು. ಕಾಲಚಕ್ರ ಉರುಳಿದಂತೆ ಪೈರಸಿ ಶುರುವಾಯಿತು. ಕಿರುತೆರೆಯ ಆರ್ಭಟ, ಇತರೆ ಸಮೂಹ ಮಾಧ್ಯಮಗಳ ಅಬ್ಬರದಿಂದ ಜನ ಚಿತ್ರಮಂದಿರಗಳತ್ತ ಬರುವುದು ಕಡಿಮೆಯಾಯಿತು. ಇದೆಲ್ಲದರಿಂದ ಒಂದೂಕಾಲು ಸಾವಿರ ಚಿತ್ರಮಂದಿರಗಳಲ್ಲಿ ಈಗ ಅಳಿದುಳಿದಿರುವುದು ಕೇವಲ 600 ಮಾತ್ರ. ಈಗ ಕರೊನಾ ಸೋಂಕು ಹರಡುವ ಭಯವು, ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಈ ಸಂಖ್ಯೆ ಇನ್ನಷ್ಟು ಕುಗ್ಗುವ ಸಾಧ್ಯತೆಗಳಿವೆ. ಈಗಾಗಲೇ ಸಿನಿಮಾ ಮಂದಿರಗಳ ಜಾಗದಲ್ಲಿ ದೊಡ್ಡ ಬಿಲ್ಡಿಂಗ್, ಮಾಲ್ಗಳು ಎದ್ದುನಿಂತಿವೆ.
ಪ್ರದರ್ಶನ ನಿಂತರೂ ಖರ್ಚು ಕಡಿಮೆಯಾಗಿಲ್ಲ: ಈ ವರ್ಷ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದು ವರ್ಷದ ಆರಂಭದಲ್ಲೇ ಸಾಕಷ್ಟು ಸುದ್ದಿಯಾಗಿತ್ತು. ಸಿನಿಮಾ ಸುಗ್ಗಿ ಕಾಲದಲ್ಲಿ ಒಂದಿಷ್ಟು ಲಾಭವಾಗುಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಚಿತ್ರಮಂದಿರದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲದ್ದಕ್ಕೆ, ಚಿತ್ರ ಪ್ರದರ್ಶನ ರದ್ದಾಗಿದೆ ಎಂದು ಸುಮ್ಮನೆ ಇರುವಂತಿಲ್ಲ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ಸಂಬಳ ಕೊಡಲೇ ಬೇಕು. ವಿದ್ಯುತ್, ಒಳಚರಂಡಿ, ನೀರಿನ ಕನಿಷ್ಠ ಬಿಲ್ ಪಾವತಿಸಬೇಕು. ಇನ್ನು ಕಳೆದ ಎರಡು ತಿಂಗಳುಗಳಿಂದ ಚಿತ್ರಮಂದಿರಗಳನ್ನು ಸಿರಯಾಗಿ ನಿರ್ವಹಣೆ ಮಾಡದಿರುವುದರಿಂದ ಅದಕ್ಕೂ ಸಾಕಷ್ಟು ಖರ್ಚು ಮಾಡಬೇಕಿದೆ.
ಸಾವಿರಾರು ಜನರಿಗೆ ಸಮಸ್ಯೆ
ಸಾಮಾನ್ಯ ಚಿತ್ರಮಂದಿರದಿಂದ ಹಿಡಿದು ಮಾಲ್ಗಳಲ್ಲಿರುವ ಚಿತ್ರಮಂದಿರ ತನಕ ಲೆಕ್ಕ ಹಿಡಿದರೆ, ಇದನ್ನೇ ನಂಬಿರುವ ಲಕ್ಷ ಜನರಿದ್ದಾರೆ. ಬರೀ ಚಿತ್ರಮಂದಿರ ಗಳಲ್ಲಿ ಕೆಲಸ ಮಾಡುವವರಷ್ಟೇ ಅಲ್ಲ, ಅದರಿಂದ ಅವಲಂಬಿತರಾಗಿರುವವರಿಗೂ ಬಿಸಿ ಮುಟ್ಟಿದೆ. ಚಿತ್ರಮಂದಿರ ಎದುರು ಕಟೌಟ್ ಹಾಕುವವರು, ಗೋಡೆಗಳಿಗೆ ಭಿತ್ತಿಪತ್ರ ಅಂಟಿಸುವವರು, ಪ್ರೊಮೋಷನ್ ಮಾಡುವವರಿಂದ ಹಿಡಿದು, ಜಾಹೀರಾತು ಉದ್ಯಮದ ತನಕ ಈ ಕ್ಷೇತ್ರವನ್ನು ಪ್ರತ್ಯಕ್ಷ, ಪರೋಕ್ಷವಾಗಿ ಅವಲಂಬಿಸಿದ್ದವರು ಕರೊನಾ ದಾಳಿಯಲ್ಲಿ ತತ್ತರಿಸಿ ಹೋಗಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮುಂದೆ ಚಿತ್ರಮಂದಿರಗಳ ಅಳಿವು ಉಳಿವು ಹೇಗೆ? ಎಂಬ ಪ್ರಶ್ನೆ ಚಿತ್ರರಂಗವನ್ನು ಕಾಡುತ್ತಿವೆ.