ಕನ್ನಡ ಚಿತ್ರರಂಗಕ್ಕೆ ಶ್ರುತಿ-ಶರಣ್ ಕುಟುಂಬದ ಇನ್ನೊಬ್ಬರ ಎಂಟ್ರಿ …

Keerthi Krishna - Final
Published on

ಬೆಂಗಳೂರು: ಶರಣ್ ಮಗ ಹೃದಯ್​, ಈಗಾಗಲೇ 'ಗುರು ಶಿಷ್ಯರು' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಈಗ ಶರಣ್​ ಕುಟುಂಬ ಇನ್ನೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಶರಣ್ ಮತ್ತು ಶ್ರುತಿ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಶರಣ್​ ಮತ್ತು ಶ್ರುತಿ ಅವರ ತಂದೆ ಕೃಷ್ಣ ಅವರು ರಂಗಭೂಮಿಯಲ್ಲಿ ದೊಡ್ಡ ಹೆಸರು. 'ಪಡುವಾರಳ್ಳಿ ಪಾಂಡವರು', 'ಡೈರೆಕ್ಟರ್ಸ್​ ಸ್ಪೆಷಲ್​' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ತಾಯಂದಿರಾದ ರಾಧ-ರುಕ್ಮಿಣಿ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದವರು. ಆ ನಂತರ ಶ್ರುತಿ ಚಿತ್ರರಂಗಕ್ಕೆ ಬಂದರು. ಅದಾಗಿ ಒಂದು ದಶಕಕ್ಕೆ ಶರಣ್​ ಸಹ ಸಿನಿಮಾಗೆ ಬಣ್ಣ ಹಚ್ಚಿದರು. ಈಗ ಕೀರ್ತಿ ಕೃಷ್ಣ, ಮನೋಜ್ ನಾಯಕನಾಗಿ ನಟಿಸುತ್ತಿರುವ 'ಧರಣಿ' ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಈ ಹಿಂದೆ ಬಿಡುಗಡೆಯಾದ ರಾಮ್ ಕುಮಾರ್ ಮತ್ತು ಶ್ರುತಿ ಅಭಿನಯದ 'ಶ್ರೀ ನಾಗ ಶಕ್ತಿ' ಚಿತ್ರದಲ್ಲಿ ಕೀರ್ತಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಆ ನಂತರ ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದಿದ್ದರು. ಇದೀಗ ಬಿಬಿಎ ಮುಗಿಸಿರುವ ಕೀರ್ತಿ, ಪೂರ್ಣಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಮೊದಲ ಹಂತವಾಗಿ, 'ಧರಣಿ' ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ.

'ಅನಂತು ವರ್ಸಸ್ ನುಸ್ರತ್' ಖ್ಯಾತಿಯ ಸುಧೀರ್ ಶಾನಭೋಗ್ ನಿರ್ದೇಶನದ ʻಧರಣಿʼ ಚಿತ್ರವನ್ನು ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ. ಉಮೇಶ್ ಮತ್ತು ಕೆ. ಗಣೇಶ್ ಐತಾಳ್ ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ, ಶ್ರೀನಿಧಿ ಡಿ ಎಸ್ ಸಂಭಾಷಣೆ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net