ಫೆ.17ಕ್ಕೆ ಬರ್ತಿಲ್ಲ ಸಮಂತಾ; 'ಶಾಕುಂತಲಂ' ಬಿಡುಗಡೆ ಮುಂದಕ್ಕೆ ಹೋಗಿದ್ದ್ಯಾಕೆ?

Shakuntalam
Published on

ಹೈದರಾಬಾದ್​: ಸಮಂತಾ ಅಭಿನಯದ ಬಹುನಿರೀಕ್ಷಿತ ಚಿತ್ರವು ಫೆ. 17ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಚಿತ್ರತಂಡದವರು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿ, ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಆದರೆ, ಚಿತ್ರದ ಬಿಡುಗಡೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದ್ದು, ಹೊಸ ಬಿಡುಗಡೆ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.

'ಶಾಕುಂತಲಂ' ಚಿತ್ರವು 2021ರಲ್ಲಿ ಪ್ರಾರಂಭವಾಗಿ ಕಳೆದ ವರ್ಷ ಮುಕ್ತಾಯವಾಗಿತ್ತು. ವರ್ಷದ ಕೊನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಸಮಂತಾ, ಚಿತ್ರದ ಭಾಗವಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದರು. ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದರು. ಆದರೆ, ಚಿತ್ರ ಇದೀಗ ಮುಂದೂಡಲ್ಪಟ್ಟಿದೆ. ಅದಕ್ಕೆ ನಿಖರವಾಗಿ ಕಾರಣವನ್ನು ಚಿತ್ರತಂಡದವರು ಹೇಳಿಕೊಳ್ಳದಿದ್ದರೂ, ಚಿತ್ರವನ್ನು ಮುಂದೂಡುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ ಮುಂದಿನ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಹೇಳಿದ್ದಾರೆ.

ಗುಣ ಟೀಂವರ್ಕ್ಸ್​ ಬ್ಯಾನರ್​ನಡಿ ನಿರ್ಮಾಣವಾಗಿರುವ 'ಶಾಕುಂತಲಂ' ಚಿತ್ರವು ಕಾಳಿದಾಸನ 'ಅಭಜ್ನಾನ ಶಾಕುಂತಲ'ವನ್ನು ಆಧರಿಸಿದೆ. ಈ ಚಿತ್ರವನ್ನು ಗುಣಶೇಖರ್​ ನಿರ್ದೇಶನ ಮಾಡಿದ್ದು, ನೀಲಿಮಾ ಗುಣ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದಾರೆ.

'ಶಾಕುಂತಲಂ' ಈ ಚಿತ್ರದಲ್ಲಿ ಸಮಂತಾ ಜತೆಗೆ ದೇವ್​ ಮೋಹನ್​, ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹ, ಮೋಹನ್​ ಬಾಬು, ಮಧುಬಾಲ, ಸಚಿನ್​ ಖೇಡೇಕರ್​, ಗೌತಮಿ ಮುಂತಾದವರು ನಟಿಸಿದ್ದು, ಈ ಚಿತ್ರವು ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net