More

    ಅರ್ಥಗರ್ಭಿತ ಚಿತ್ರ ತನುಜಾ: ಡಾ. ವಿಜಯ ಸಂಕೇಶ್ವರ ಅಭಿಮತ; ಜನರಿಗೆ ಸಹಾಯ ಮಾಡಲು ಲಕ್ಷ್ಮಣರೇಖೆ ದಾಟಿದರೂ ತಪ್ಪಲ್ಲ

    ಬೆಂಗಳೂರು: ‘ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜಕಾರಣಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದು ‘ತನುಜಾ’ ಚಿತ್ರದಲ್ಲಿ ಬಹಳ ಚೆನ್ನಾಗಿ ಕಟ್ಟಿಕೊಡಲಾಗಿದೆ’ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾದ ‘ತನುಜಾ’ ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಮ್ಮ ಕುಟುಂಬ ಸಮೇತ ಈ ಚಿತ್ರವನ್ನು ವೀಕ್ಷಿಸಿರುವ ಡಾ. ವಿಜಯ ಸಂಕೇಶ್ವರ ಚಿತ್ರ ಚೆನ್ನಾಗಿ ಮೂಡಿಬಂದಿರುವುದಷ್ಟೇ, ಅರ್ಥಗರ್ಭಿತವಾಗಿದೆ’ ಎಂದು ಹೇಳಿದ್ದಾರೆ.

    ‘ತನುಜಾ’ ಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ಅವರು, ‘ಕಳೆದ 35 ವರ್ಷಗಳಿಂದ ನಾನು ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರ ಜತೆಗೆ ಬಹಳ ನಿಕಟ ಸಂಪರ್ಕದಲ್ಲಿದ್ದೇನೆ. ಅವರ ತಲೆಯಲ್ಲಿ ಇರುವುದು ಎರಡೇ ವಿಷಯಗಳು. ಒಂದು, ಅತ್ಯಂತ ಸಾಮಾನ್ಯ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಿಕೊಡಬೇಕು ಎಂಬುದು. ಎರಡನೆಯದು, ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗುವುದು. ಇದನ್ನು ಬಿಟ್ಟು ಮೂರನೆಯ ವಿಷಯ ಅವರ ತಲೆಯಲ್ಲಿ ಇಲ್ಲ’ ಎಂದು ಹೇಳಿದ್ದಾರೆ. ‘ವಿಶ್ವೇಶ್ವರ ಭಟ್ ಅವರನ್ನು ನಾನು ಕಳೆದ 25 ವರ್ಷಗಳಿಂದ ಬಲ್ಲೆ. ಅತ್ಯಂತ ಚಾಣಾಕ್ಷ ಮತ್ತು ಬುದ್ಧಿವಂತ ಪತ್ರಕರ್ತರು. ಮಾಧ್ಯಮದಿಂದ ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬ ಆಶಯ ಅವರದು. ಅದೇ ರೀತಿ ಅನೇಕ ಪುಸ್ತಕಗಳನ್ನು ಬರೆದು ಅವರು ಯುವಜನತೆಗೆ ಸ್ಪೂರ್ತಿ ಯಾಗಿದ್ದಾರೆ. ಈ ಚಿತ್ರ ನೋಡಿ ಬಂದ ನಂತರ, ವಿಶ್ವೇಶ್ವರ ಭಟ್ ಅವರಿಗೆ ಫೋನ್ ಮಾಡಿದ್ದೆ. ನೀವು ಒಳ್ಳೆಯ ಬರಹಗಾರರು ಮತ್ತು ಸಂಪಾದಕರಷ್ಟೇ ಅಲ್ಲ, ಒಳ್ಳೆಯ ನಟರೂ ಹೌದು ಎಂದೆ. ಬಹಳ ಕಷ್ಟಪಟ್ಟು ಒಳ್ಳೆಯ ನಟನೆಯನ್ನು ಮಾಡಿ, ಜನರಿಗೆ ಮನದಟ್ಟಾಗುವ ಹಾಗೆ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಆರೋಗ್ಯ ಸಚಿವ ಕೆ. ಸುಧಾಕರ್ ಅವರ ಬಗ್ಗೆಯೂ ಮಾತನಾಡಿರುವ ಡಾ. ವಿಜಯ ಸಂಕೇಶ್ವರ, ‘ಸುಧಾಕರ್ ಅವರ ಪರಿಚಯ ಕಳೆದ ಐದು ವರ್ಷಗಳಿಂದ ಇದೆ. ಅವರು ಮಾಡುವ ಕೆಲಸಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅನೇಕ ಬಾರಿ ಅವರನ್ನು ಭೇಟಿ ಮಾಡುವುದರ ಜತೆಗೆ, ಅವರೊಂದಿಗೆ ಸಂವಾದ ಮಾಡಿದ್ದೇನೆ. ಸಮಾಜದ ಬಗ್ಗೆ ಅತ್ಯಂತ ಕಳಕಳಿ ಇರುವ ಅವರು ದೊಡ್ಡ ಸಂಸ್ಥೆಯಲ್ಲಿ ದೊಡ್ಡ ಹುದ್ದೆ ಮತ್ತು ಜವಾಬ್ದಾರಿಯನ್ನು ಬಿಟ್ಟು ರಾಜಕೀಯಕ್ಕೆ ಬಂದ ವಿಶೇಷ ವ್ಯಕ್ತಿ ಅವರು. ಕರೊನಾ ವೇಳೆಯಲ್ಲಿ ತಮ್ಮ ಶಕ್ತಿ ಮೀರಿ, ಕರ್ನಾಟಕ ಜನತೆಯ ಕೆಲಸ ಮಾಡಿದ್ದಾರೆ. ಅದನ್ನು ಯಾರೂ ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಮಾಜ ಸೇವೆ ಮಾಡಲಿ’ ಎಂದು ಹಾರೈಸಿದ್ದಾರೆ.

    ಒಟ್ಟಾರೆ ಬಿ.ಎಸ್. ಯಡಿಯೂರಪ್ಪ, ವಿಶ್ವೇಶ್ವರ ಭಟ್ ಮತ್ತು ಸುಧಾಕರ್ ಅವರ ಕಾಳಜಿಯಿಂದ, ಕರೊನಾ ವೇಳೆಯಲ್ಲಿ ಒಬ್ಬ ಹಳ್ಳಿಯ ಬಡಹುಡುಗಿ ನೀಟ್ ಪರೀಕ್ಷೆ ಬರೆಯುವುದಕ್ಕೆ ಸಹಾಯವಾಯಿತು ಎಂದಿರುವ ಅವರು, ‘ಅನೇಕ ಅಡೆತಡೆಗಳಿದ್ದರೂ, ಅದನ್ನೆಲ್ಲ ಮೆಟ್ಟಿ ಆ ಹುಡುಗಿ ಪರೀಕ್ಷೆ ಬರೆಯುವಂತಾಯಿತು. ಕೆಲವು ಅಧಿಕಾರಿಗಳು, ಪ್ರೋಟೋಕಾಲ್ ಹೆಸರಲ್ಲಿ ತಮ್ಮ ಕೆಲಸ ಮತ್ತು ಜವಾಬ್ದಾರಿಗಳೀಂದ ನುಣುಚಿಕೊಳ್ಳುತ್ತಾರೆ. ಕೆಲವರು ಮಾತ್ರ ಸ್ಪಂದನೆ ಮಾಡುತ್ತಾರೆ. ಇಲ್ಲಿ ಆ ಎರಡೂ ರೀತಿಯ ಜನರನ್ನು ನೋಡುವುದಕ್ಕೆ ಸಿಗುತ್ತದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಎಂಥಾ ಪ್ರೋಟೋಕಾಲ್ ಪರಿಸ್ಥಿತಿ ಇದ್ದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಯಾರಿಗಾದರೂ ಸಹಾಯ ಮಾಡುವಾಗ, ಲಕ್ಷ್ಮಣರೇಖೆಯನ್ನು ದಾಟಿದರೆ ಜನರಿಗೆ ಒಳ್ಳೆಯದಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘‘ತನುಜಾ’ದಂತಹ ಉತ್ತಮ ಸಿನಿಮಾಗಳು ಇನ್ನಷ್ಟು ಬರಬೇಕು. ಪ್ರೇಕ್ಷಕರು ತಮ್ಮ ಕುಟುಂಬ ಸಮೇತ ಇಂಥ ಚಿತ್ರ ನೋಡಿದರೆ ಅನೇಕ ಬದಲಾವಣೆಗಳಾಗುತ್ತವೆ. ಅಧಿಕಾರಿ ವರ್ಗದವರು ನೋಡಿದರೆ, ಅವರು ಸಹ ಅನೇಕ ಬದಲಾವಣೆಗಳನ್ನು ತರುವುದಕ್ಕೆ ಬಹಳ ಸಹಾಯವಾಗುತ್ತದೆ’ ಎಂದು ಡಾ. ವಿಜಯ ಸಂಕೇಶ್ವರ ಹೇಳಿದ್ದಾರೆ.

    ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು ಪರಾರಿಯಾದ ದಂಪತಿ; ಕೋಟಿಗಟ್ಟಲೆ ರೂ. ವಂಚನೆ, ಪೊಲೀಸರಿಗೆ ದೂರು

    ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋಗಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು, ನಾಲ್ವರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts