More

    ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋಗಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು, ನಾಲ್ವರಿಗೆ ಗಾಯ

    ಬೆಂಗಳೂರು: ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರ ಬೀಗರ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ

    ಎಚ್‌ಬಿಆರ್ ಲೇಔಟ್ ನಿವಾಸಿ ಮಜೀದ್ ಖಾನ್ (36) ಮತ್ತು ಕೆ.ಜಿ.ಹಳ್ಳಿ ನಿವಾಸಿ ಅಯ್ಯಪ್ಪ (60) ಮೃತಪಟ್ಟ ಸವಾರರು. ಸವಾರರಾದ ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ ಹಾಗೂ ಶೇರ್ ಗಿಲಾನಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಘಟನೆ ಸಂಬಂಧ ಇನೋವಾ ಕಾರು ಚಾಲಕ ಎಂ.ಮೋಹನ್ (48) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಸರಣಿ ಅಪಘಾತದಲ್ಲಿ ಟೊಯೋಟಾ, ಇಟಿಎಸ್ ಕಾರು, ಆಲ್ಟೋ ಕಾರು, ಪಲ್ಸರ್ ದ್ವಿಚಕ್ರ ವಾಹನ, ಎರಡು ಹೋಂಡ ಆಕ್ವೀವಾ ದ್ವಿಚಕ್ರ ವಾಹನ ಸೇರಿ ಒಟ್ಟು 5 ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆಯ ಮಾರ್ಗ ಮಧ್ಯೆ ಇಬ್ಬರು ಸಾವು: ಇನೋವಾ ಕಾರು ಚಾಲಕ ಮೋಹನ್ ಸೋಮವಾರ ಮಧ್ಯಾಹ್ನ 3.15ರ ಸುಮಾರಿಗೆ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ವೇಗವಾಗಿ ಕಾರು ಚಾಲನೆ ಮಾಡಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮೂರು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮಜೀದ್ ಖಾನ್ ಮತ್ತು ಪಲ್ಸರ್ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಅಯ್ಯಪ್ಪ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಉಳಿದಂತೆ ಸವಾರರಾದ ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ ಹಾಗೂ ಶೇರ್ ಗಿಲಾನಿ ಕೂಡ ಗಾಯಗೊಂಡಿದ್ದರು.

    ಸಂಚಾರ ಪೊಲೀಸರು ಹಾಗೂ ಸ್ಥಳೀಯರು ಕೂಡಲೇ ಆರು ಮಂದಿ ಗಾಯಾಳುಗಳನ್ನು ಸಮೀಪದ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಜೀದ್ ಖಾನ್ ಮತ್ತು ಅಯ್ಯಪ್ಪ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.

    ನಾಲ್ವರು ಪ್ರಾಣಾಪಾಯದಿಂದ ಪಾರು: ಉಳಿದ ನಾಲ್ವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಣಿ ಅಪಘಾತಕ್ಕೆ ಕಾರು ಚಾಲಕನ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಸಂಬಂಧ ಕಾರು ಚಾಲಕ ಮೋಹನ್‌ನನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕಾರು ಮಾಲೀಕ ರಾಮು ಸುರೇಶ್ ಹಾಗೂ ಚಾಲಕನ ವಿರುದ್ಧ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಾಸಕರ ಪುತ್ರಿ ಕರೆತರಲು ಹೋಗುವಾಗ ಅಪಘಾತ: ಕೆಎ-50 ಎಂಎ-6600 ಎಂಬ ಸಂಖ್ಯೆಯ ಕಾರಿನಿಂದ ಅಪಘಾತವಾಗಿದ್ದು, ಈ ಕಾರು ಯಲಹಂಕ ನಿವಾಸಿ ಹಾಗೂ ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ರಾಮು ಸುರೇಶ್ ಮಾಲೀಕತ್ವದಲ್ಲಿದೆ. ರಾಮು ಸುರೇಶ್ ಅವರ ಪುತ್ರನಿಗೆ ಶಾಸಕ ಹರತಾಳು ಹಾಲಪ್ಪ ಅವರ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದೆ. ಈಕೆ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆದುಕೊಂಡು ಬರಲು ಚಾಲಕ ಮೋಹನ್ ಕಾರಿನಲ್ಲಿ ಹೋಗುವಾಗ ಮಾರ್ಗಮಧ್ಯೆ ನೃಪತುಂಗ ರಸ್ತೆಯಲ್ಲಿ ಈ ದುರಂತ ನಡೆದಿದೆ.

    ಸ್ಟಿಕ್ಕರ್ ಕಿತ್ತು ಹಾಕಿದ ಬೆಂಬಲಿಗರು: ಅಪಘಾತ ಎಸಗಿದ ಇನೋವಾ ಕಾರಿಗೆ ಶಾಸಕ ಹರತಾಳು ಹಾಲಪ್ಪ ಅವರ ಗುರುತಿನ ಸ್ಟಿಕ್ಕರ್ ಅಂಟಿಸಲಾಗಿತ್ತು. ಅಪಘಾತದ ಬಳಿಕ ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ಕಾರನ್ನು ಜಪ್ತಿ ಮಾಡಿ ಚಾಲಕ ಮೋಹನ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಈ ವೇಳೆ ಕಾರಿನ ಮುಂಬದಿಯ ಗಾಜಿನ ಮೇಲೆ ಅಂಟಿಸಲಾಗಿದ್ದ ಶಾಸಕರ ಗುರುತಿನ ಸ್ಟಿಕ್ಕರ್ ಬೆಂಬಲಿಗರು ಕಿತ್ತು ಹಾಕಿದರು ಎನ್ನಲಾಗಿದೆ.

    ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

    1,500ಕ್ಕೂ ಅಧಿಕ ಜನರು ಸತ್ತ ಬೆನ್ನಿಗೇ ಮತ್ತೊಂದು ಭೀಕರ ಭೂಕಂಪ!; ಮೂರನೇ ಸಲ ನಡುಗಿದ ಟರ್ಕಿ

    ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು ಪರಾರಿಯಾದ ದಂಪತಿ; ಕೋಟಿಗಟ್ಟಲೆ ರೂ. ವಂಚನೆ, ಪೊಲೀಸರಿಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts