More

    ಬೆಚ್ಚಿ ಬೀಳಿಸುವ ಬಹುವಿಧ ಬಿಕ್ಕಳಿಕೆ

    dನಿರಂತರವಾಗಿ ಉಪಟಳ ನೀಡಬಲ್ಲ ಹಾಗೂ ಪ್ರಾಣಕ್ಕೇ ಸಂಚಕಾರ ತಂದೊಡ್ಡಬಲ್ಲ ಕೆಲವೊಂದಿಷ್ಟು ಕಾಯಿಲೆಗಳಿವೆ. ಬಿಕ್ಕಳಿಕೆ ಇದೇ ಸಾಲಿನಲ್ಲಿ ನಿಲ್ಲುತ್ತದೆ. ಕ್ಷಣಕಾಲ ಶ್ವಾಸವನ್ನು ತಡೆದು ಹಿಕ್ ಎನ್ನುವ ಶಬ್ದವನ್ನು ಉಂಟುಮಾಡುವುದರಿಂದ ಆಯುರ್ವೆದ ಇದಕ್ಕೆ ಹಿಕ್ಕಾ ಎಂಬ ಹೆಸರನ್ನು ನೀಡಿದೆ. ಹಿಧ್ಮಾ ಎಂಬ ರೋಗನಾಮವೂ ಇದೆ. ಪಾಶ್ಚಿಮಾತ್ಯ ವೈದ್ಯಕೀಯ ವಿಧಾನದಲ್ಲೂ ಆಯುರ್ವೆದವನ್ನೇ ಹೋಲುವ ಹಿಕ್ಕಪ್ ಎಂಬ ಹೆಸರಿದೆ! ದೇಹದೊಳಗೆ ಎದೆ ಹಾಗೂ ಹೊಟ್ಟೆಯನ್ನು ಪ್ರತ್ಯೇಕಿಸುವ ಪದರವಾದ ವಪೆಯು ಉಸಿರಾಟದ ಉಚ್ಛಾ್ವಸ ನಿಶ್ವಾಸಕ್ಕೆ ಪೂರಕವಾಗಿ ಹಿಗ್ಗುತ್ತದೆ, ಕುಗ್ಗುತ್ತದೆ. ಶ್ವಾಸಕೋಶವು ಗಾಳಿಯನ್ನು ಹೊರಗಿನಿಂದ ದೇಹದೊಳಗೆ ತೆಗೆದುಕೊಳ್ಳುವ ಉಚ್ಛಾ್ವಸದ ಸಂದರ್ಭದಲ್ಲಿ ವಪೆಯು ವ್ಯತಿರಿಕ್ತವಾಗಿ ಸಂಕುಚಿತಗೊಂಡರೆ ಶ್ವಾಸಕೋಶದಲ್ಲಿದ್ದ ವಾಯುವು ಹಿಕ್ ಎಂದು ಸದ್ದು ಮಾಡುತ್ತಾ ಹೊರಗೆ ತಳ್ಳಲ್ಪಡುತ್ತದೆ. ಬಿಕ್ಕಳಿಕೆ ಕಾಯಿಲೆಯಲ್ಲಿ ನಡೆಯುವುದಿಷ್ಟೇ ಆದರೂ ಎಲ್ಲ ಸಂದರ್ಭಗಳಲ್ಲೂ ಇದು ಸಣ್ಣ ತೊಂದರೆಯಲ್ಲ. ಈ ಹಿಕ್ಕಾ ರೋಗದಲ್ಲಿ ವೈವಿಧ್ಯವಿದೆ. ಹಾಗಾಗಿಯೇ ಆಯುರ್ವೆದದ ವೈದ್ಯವಿಜ್ಞಾನಿಋಷಿಗಳು ಬಿಕ್ಕಳಿಕೆಯಲ್ಲಿ ಐದು ವಿಧಗಳನ್ನು ಪರಾಮಶಿಸಿದ್ದಾರೆ.

    ಅನ್ನಜ, ಯಮಲಾ, ಕ್ಷುದ್ರಾ, ಗಂಭೀರಾ ಹಾಗೂ ಮಹತೀ ಎಂಬ ಐದು ವಿಧದ ಬಿಕ್ಕಳಿಕೆಗಳಲ್ಲಿ ಪ್ರಾಣ, ಉದಾನ ವಾತಗಳು, ಅವಲಂಬಕ, ಶ್ಲೇಷಕ ಕಫಗಳು, ಪಾಚಕ ಪಿತ್ತ, ರಸ, ರಕ್ತಧಾತುಗಳು, ಪ್ರಾಣವಹ ಉದಕವಹ, ಅನ್ನವಹ ಸ್ರೋತಸ್ಸುಗಳ ಪಾಲ್ಗೊಳ್ಳುವಿಕೆಯಿರುತ್ತದೆ. ಕಾಯಿಲೆ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಕೆಲವು ಪೂರ್ವಲಕ್ಷಣಗಳು ಗೋಚರಿಸುತ್ತವೆ. ಗಂಟಲು ಹಾಗೂ ಎದೆಭಾಗದಲ್ಲಿ ಭಾರವಾದಂತಹ ಅನುಭವ, ಬಾಯಿಯಲ್ಲಿ ಒಗರು ರುಚಿ, ಹೊಟ್ಟೆಯಲ್ಲಿ ಗುಡುಗುಡು ಶಬ್ದವಾಗುವುದು ಇವುಗಳಲ್ಲಿ ಮುಖ್ಯವಾದವುಗಳು.

    ಅನ್ನಜ ಹಿಕ್ಕಾ: ಅತಿಯಾದ ಆಹಾರ ಸೇವನೆ, ಮದ್ಯಪಾನ, ಕೋಪ, ಭಾಷಣ, ಪಾದರಕ್ಷೆ ಇಲ್ಲದೆ ನಡೆದಾಡುವುದು, ಅತಿಯಾಗಿ ನಗುವುದು, ಭಾರವಾದ ವಸ್ತುಗಳನ್ನು ಎತ್ತುವುದು, ಮೊದಲಾದವುಗಳಿಂದ ಉಂಟಾಗುವ ಬಿಕ್ಕಳಿಕೆ. ಭೇದಿ, ಬಾಯಾರಿಕೆ, ಆಕಳಿಕೆ, ಕಣ್ಣಗಳಲ್ಲಿ ನೀರು, ಬಾಯಿ ಒಣಗುವಿಕೆ, ದೇಹವು ಮುಂದಕ್ಕೆ ಬಾಗಿದಂತಾಗುವುದು, ಹೊಟ್ಟೆ ಉಬ್ಬರ, ಮನಸ್ಸಿನಲ್ಲಿ ಗೊಂದಲ, ಅಸಂಬದ್ಧ ಮಾತು ಮುಂತಾದ ಲಕ್ಷಣಗಳೂ ಸ್ವಲ್ಪಹೊತ್ತು ಕಾಣಿಸಿಕೊಳ್ಳಬಹುದು. ಆದಾಗ್ಯೂ ಹೆಚ್ಚಿನ ತೊಂದರೆ ಮಾಡುವುದಿಲ್ಲ. ಸಾಮಾನ್ಯವಾಗಿ ಆಹಾರ ಸೇವಿಸಿದ ತಕ್ಷಣ ಈ ಬಿಕ್ಕಳಿಕೆಯು ಹೆಚ್ಚಾಗುತ್ತದೆ. ಅನ್ನಪಾನಗಳನ್ನು ಸರಿಯಾಗಿ ಸೇವಿಸಿದರೆ ಇದು ಹಾಗೆಯೇ ಶಮನವಾಗುತ್ತದೆ.

    ಯಮಲಾ ಹಿಕ್ಕಾ: ನಿರಂತರವಾಗಿ ಎರಡೆರಡು ಬಾರಿ ಬಿಕ್ಕಳಿಕೆ ಆಗುತ್ತಾ ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ನಡುಕವನ್ನು ಉಂಟುಮಾಡಿ ಕೆಲವು ದಿನಗಳ ಕಾಲ ಬಾಧಿಸುವ ಯಮಲಾ ಬಿಕ್ಕಳಿಕೆಯು ಸೂಕ್ತ ಔಷಧೋಪಚಾರಗಳಿಂದ ಶಮನವಾಗುತ್ತದೆ.

    ಕ್ಷುದ್ರ ಹಿಕ್ಕಾ: ಕುತ್ತಿಗೆಯ ಮೂಲ ಭಾಗದಿಂದ ಆರಂಭವಾಗಿ ಸ್ವಲ್ಪವೇ ತೀವ್ರತೆಯೊಂದಿಗೆ ಕೆಲಕಾಲ ಮಾತ್ರ ಬಾಧಿಸುವ ಕ್ಷುದ್ರ ಹಿಕ್ಕಾವು ಆಹಾರ ಸೇವನೆ, ವ್ಯಾಯಾಮ ಅಥವಾ ಶ್ರಮದಾಯಕ ಕೆಲಸ ಮಾಡುವಾಗ ಉಂಟಾಗುತ್ತದೆ.

    ಗಂಭೀರ ಹಿಕ್ಕಾ: ನಾಭಿ ಅಂದರೆ ಹೊಕ್ಕುಳ ಪ್ರದೇಶದಿಂದ ಉದ್ಭವಗೊಂಡು ದೊಡ್ಡದಾದ ಶಬ್ದದೊಂದಿಗೆ ಅನೇಕ ತೊಂದರೆಗಳನ್ನು ನೀಡುವ ಬಿಕ್ಕಳಿಕೆಯೇ ಗಂಭೀರ ಹಿಕ್ಕಾ. ಅತಿಯಾಗಿ ಬಿಕ್ಕಳಿಕೆ ಆಗುತ್ತಿದ್ದು ಶರೀರವನ್ನು ಕೃಶವಾಗಿಸುತ್ತದೆ. ಕಷ್ಟಕರವಾಗಿ ಆಳದಿಂದ ದೊಡ್ಡ ಶಬ್ದ ಮಾಡುತ್ತಾ, ಆಕಳಿಸುವಾಗ, ಕೈಕಾಲುಗಳನ್ನು ಬಿಡಿಸಿ ಮಡಿಸುವಾಗ, ಎದೆಯ ಎರಡು ಪಕ್ಕೆಗಳಲ್ಲಿ ಹಿಡಿದಂತಾಗಿ ವೇದನೆ ಉಂಟುಮಾಡುತ್ತದೆ. ಅತಿಯಾಗಿ ನಿತ್ರಾಣವನ್ನು ಮಾಡಿ ಇಡೀ ದೇಹವನ್ನೇ ಶಕ್ತಿಹೀನವಾಗಿಸಿ ಮನಸ್ಸನ್ನೂ ಕುಗ್ಗಿಸಿ ಬಿಡುತ್ತದೆ. ಜ್ವರ, ಅತಿಬಾಯಾರಿಕೆಗಳೂ ಕಾಣಿಸಿಕೊಳ್ಳುತ್ತವೆ. ಕೊನೆಯಲ್ಲಿ ಪ್ರಾಣಾಪಾಯವನ್ನೂ ಉಂಟುಮಾಡುವುದರಿಂದ ಹೆಸರಿಗೆ ತಕ್ಕಂತೆ ಗಂಭೀರವಾಗಿದೆ.

    ಮಹತೀ ಹಿಕ್ಕಾ: ದೇಹದ ತ್ರಿಮರ್ಮಗಳಾದ ಹೃದಯ, ಮೂತ್ರಾಶಯ, ಶಿರಸ್​ಗಳಿಗೆ ಸತತವಾಗಿ ಒತ್ತಡವನ್ನು ಉಂಟುಮಾಡುತ್ತಾ, ಸಮಸ್ತ ಶರೀರವನ್ನೇ ಅಲುಗಾಡಿಸುತ್ತಾ ತೀವ್ರವಾಗಿ ಬಾಧಿಸುವ ಬಿಕ್ಕಳಿಕೆಯೇ ಮಹತೀ ಹಿಕ್ಕಾ ಅಥವಾ ಮಹಾ ಹಿಕ್ಕಾ. ಕ್ಷೀಣ ಶರೀರ ಹೊಂದಿರುವವರು ಬಲ ಹೀನರಾಗಿ ಉಸಿರಾಟ ಕಷ್ಟವಾಗುತ್ತಿದ್ದರೆ, ವಾತ ಕಫಗಳು ಅಂತಹ ವ್ಯಕ್ತಿಯ ಗಂಟಲನ್ನು ಅದೇಕಾಲದಲ್ಲಿ ಬಾಧಿಸಿದರೆ, ಪ್ರಾಣವಾಯುವು ಹೃದಯಾದಿಗಳ ಮೇಲೆ ಒತ್ತಡವನ್ನು ಉಂಟುಮಾಡಿ ಅನ್ನನಾಳ, ಶ್ವಾಸನಾಳಗಳಲ್ಲಿ ತಡೆಯನ್ನುಂಟು ಮಾಡಿದಾಗ ಎಚ್ಚರ ತಪ್ಪುವುದಿದೆ. ಕಣ್ಣಂಚಿನಲ್ಲಿ ನೀರು, ತಲೆಯ ಶಂಖಪ್ರದೇಶದಲ್ಲಿ ಸ್ತಬ್ಧತೆ, ಕಣ್ಣಿನ ಹುಬ್ಬುಗಳು ವಿಚಲಿತವಾಗಿ, ಧ್ವನಿಯು ಕ್ಷೀಣವಾಗಿ, ಅಸಂಬದ್ಧ ಮಾತು, ಮರೆವುಗಳು ಉಂಟಾಗುತ್ತವೆ. ದೇಹದ ಆಳದಿಂದ ಹೊರಟು ತೀವ್ರ ವೇಗ ಹಾಗೂ ದೊಡ್ಡ ಶಬ್ದದೊಂದಿಗೆ ಬಿಕ್ಕಳಿಕೆ ಉಂಟಾಗಿ ಬಹುಬೇಗನೆ ತೀವ್ರತೆ ಹೆಚ್ಚಾಗುತ್ತಾ ಸಾಗಿ ಜೀವಕ್ಕೆ ಕುತ್ತಾಗಿ ಪರಿಣಮಿಸುತ್ತದೆ. ಬಿಕ್ಕಳಿಕೆಗೆ ಆಯುರ್ವೆದ ಹೇಳಿದ ಪರಿಹಾರ ತಿಳಿದುಕೊಂಡರೆ ಬದುಕಿನಲ್ಲಿ ಭೀತಿ ಇರದು.

    ಭಾರತ ಪ್ರವಾಸ ಕೈಗೊಂಡ ಮಾಲ್ಡೀವ್ಸ್​ ವಿದೇಶಾಂಗ ಸಚಿವ ಮೂಸಾ ಜಮೀರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts