

ಕೊಚ್ಚಿ: ಮದುವೆ ಹೆಸರಲ್ಲಿ ವಂಚನೆಗೊಳಗಾದ ಮಲಯಾಳಂ ನಟಿ ಶಾಮ್ನಾ ಕಾಸಿಂ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ "ಪೂರ್ಣ" ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಶಾಮ್ನಾ ಇದುವರೆಗೂ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
2009ರಲ್ಲಿ ಬಿಡುಗಡೆಯಾದ "ಜೋಶ್" ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಶಾಮ್ನಾ, ನಂತರ 2013ರಲ್ಲಿ ಬಿಡುಗಡೆಯಾದ ನಟ ಕೋಮಲ್ ಅಭಿನಯದ ರಾಧನ ಗಂಡ ಚಿತ್ರದಲ್ಲಿ ಕಾಣಿಸಿಕೊಂಡರು. ಇದರೊಂದಿಗೆ 100 ಮೂವೀ ಹೆಸರಿನ ಚಿತ್ರದಲ್ಲೂ ನಟಿಸುತ್ತಿದ್ದಾರೆ. 2019ರಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಬಿಡುಗಡೆಯಾಗಬೇಕಿದೆ.
ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರರಂಗದ ಸಾಕಷ್ಟು ಚಿತ್ರದಲ್ಲಿ ಶಾಮ್ನಾ ನಟಿಸಿದ್ದಾರೆ. ನಟ ಸೂರ್ಯ ನಟನೆಯ ಕಾಪ್ಪನ್, ಜಯರಾಂ ಹಾಗೂ ವಿಜಯ್ ಸೇತುಪತಿ ಅಭಿನಯದ ಮಾರ್ಕೋನಿ ಮಥಾಯಿ ಮತ್ತು ಮಮ್ಮೂಟ್ಟಿ ನಟನೆಯ ಒರು ಕುಟ್ಟನದನ್ ಸೇರಿದಂತೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಬಹುಭಾಷಾ ತಾರೆ ಎಂಬ ಹೆಸರನ್ನು ಗಳಿಸಿದ್ದಾರೆ.
ಸ್ಟಾರ್ ನಟಿಗೆ ವಂಚಿಸಿದ ಆರೋಪಿಗಳ ಬಂಧನ
ಮದುವೆ ಹೆಸರಲ್ಲಿ ನಟಿಗೆ ವಂಚಿಸಿರುವ ನಾಲ್ವರು ಆರೋಪಿಗಳು ತ್ರಿಸ್ಸೂರ್ ಮೂಲದವರಾಗಿದ್ದು, ಅವರನ್ನು ವದನಪಲ್ಲಿಯ ರಫೀಖ್, ಕಡವನೂರಿನ ರಮೇಶ್, ಕೈಪಮಂಗಳಂದ ಶರತ್ ಮತ್ತು ಚೆಟ್ಟುವಾದ ಅಶ್ರಫ್ ಎಂದು ಗುರುತಿಸಲಾಗಿದೆ. ಖದೀಮರ ಗ್ಯಾಂಗ್ನಲ್ಲಿ ಓರ್ವ ಹೇಗೋ ನಟಿಯ ನಂಬರ್ ಪಡೆದು, ಸ್ನೇಹ ಬೆಳೆಸಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಪೊಲೀಸ್ ವಿಚಾರಣೆಯಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ...