ಒಂದೂವರೆ ವರ್ಷಗಳಿಂದ ನಮ್ಮಿಬ್ಬರಿಗೂ ಕೆಲಸವಿಲ್ಲ ... ಶಾರೂಖ್​ ಮಾತಿನ ಮರ್ಮವೇನು?

Shahrukh Khan - Final
Published on

ಒಂದು ವಿಷಯದಲ್ಲಿ ಶಾರೂಖ್​ ಖಾನ್​ ಅವರನ್ನು ಮೆಚ್ಚಲೇ ಬೇಕು, ಅವರು ಸುಖಾಸುಮ್ಮನೆ ತಮ್ಮನ್ನು ಹೊಗಳಿಕೊಳ್ಳುವುದಿಲ್ಲ ಮತ್ತು ಇದ್ದಿದ್ದನ್ನು ನೇರವಾಗಿ ಹೇಳಿಕೊಳ್ಳುತ್ತಾರೆ ಎಂದು ಬಾಲಿವುಡ್​ ಮಂದಿ ಆಗಾಗ ಹೇಳುವುದು ಉಂಟು. ಈಗ್ಯಾಕೆ ಈ ವಿಷಯ ಎಂದರೆ, ಶಾರೂಖ್​ ಮತ್ತೊಮ್ಮ ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ.

ಶಾರೂಖ್​ ಖಾನ್​ ಅವರ ಪತ್ನಿ ಗೌರಿ, ಬೆಳಿಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಒಂದು ಹಳೆಯ ಫೋಟೋ ಶೇರ್​ ಮಾಡಿಕೊಂಡಿದ್ದರು. ಪ್ಯಾರಿಸ್​ನ ಗ್ರೆವಿನ್​ ವ್ಯಾಕ್ಸ್​ ಮ್ಯೂಸಿಯಂನಲ್ಲಿರುವ ಶಾರೂಖ್​ ಅವರ ಮೇಣದ ಗೊಂಬೆಯ ಜತೆಗೆ ತೆಗೆಸಿಕೊಂಡಿದ್ದ ಫೋಟೋ ಆಗಿತ್ತು. ಈ ಫೋಟೋದಲ್ಲಿ ಅಸಲಿ ಮತ್ತು ನಕಲಿ ಶಾರೂಖ್​ ಮಧ್ಯೆ ಗೌರಿ ನಿಂತುಕೊಂಡಿದ್ದಾರೆ. ಈ ಫೋಟೋ ಹಂಚಿಕೊಂಡ ಗೌರಿ, 'ಟೂ ಮಚ್​ ಟು ಹ್ಯಾಂಡಲ್​ ...' ಎಂಬ ಕ್ಯಾಪ್ಶನ್​ ಕೊಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶಾರೂಖ್​, 'ಕಳೆದ ಒಂದೂವರೆ ವರ್ಷಗಳಿಂದ ಇಬ್ಬರೂ ಮನೆಯಲ್ಲೇ ಇದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಶಾರೂಖ್​ ಈ ರೀತಿ ಬರೆದುಕೊಂಡಿರುವುದಕ್ಕೂ ಕಾರಣವಿದೆ. ಕಳೆದ ಒಂದೂವರೆ ವರ್ಷಗಳಿಂದ ಅವರು ಕೆಲಸ ಮಾಡಿಲ್ಲ. 2018ರಲ್ಲಿ ಬಿಡುಗಡೆಯಾದ ಆನಂದ್​ ರೈ ಅವರ 'ಜೀರೋ' ಚಿತ್ರವೇ ಕೊನೆ. ಆ ಚಿತ್ರ ಸೋತಿದ್ದೇ ಸೋತಿದ್ದು, ಅದರಿಂದ ಬಹಳ ಬೇಸರಗೊಂಡ ಶಾರೂಖ್​ ಹಲವು ದಿನಗಳ ಕಾಲ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಸುಮ್ಮನೆ ಒಂದು ಬ್ರೇಕ್​ ತೆಗೆದುಕೊಂಡು, ತಮ್ಮ ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್​ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.

ಈ ವರ್ಷದ ಆರಂಭದಲ್ಲಿ ಒಂದು ವರ್ಷದ ಬ್ರೇಕ್​ನ ನಂತರ ಒಂದೆರೆಡು ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡುವುದಕ್ಕೆ ಒಪ್ಪಿಕೊಂಡರಾದರೂ, ಲಾಕ್​ಡೌನ್​ನಿಂದಾಗಿ ಆ ಚಿತ್ರಗಳು ಶುರುವಾಗಿಲ್ಲ. ಅದೇ ಕಾರಣಕ್ಕೆ ಶಾರೂಖ್​, ಒಂದೂವರೆ ವರ್ಷಗಳಿಂದ ಮನೆಯಲ್ಲೇ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net