

ಶಾರ್ಜಾ: ಕಳೆದ ಮೂರು ವರ್ಷಗಳಿಂದ ಶಾರೂಖ್ ಖಾನ್ ಹೀರೋ ಆಗಿ ಅಭಿನಯಿಸಿದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಅದಕ್ಕೂ ಮೊದಲು ಬಿಡುಗಡೆಯಾದ ಚಿತ್ರಗಳು ಫ್ಲಾಪ್ ಆಗಿದ್ದವು. ಈಗ ಅವರು ಪಠಾಣ್, ಡಂಕಿ ಮತ್ತು ಜವಾನ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಮೂರಕ್ಕೆ ಮೂರೂ ಚಿತ್ರಗಳು ಸೂಪರ್ ಹಿಟ್ ಆಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಇತ್ತೀಚೆಗೆ ಸಂದರ್ಶನದಲ್ಲಿ ಅವರನ್ನು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಕೇಳಲಾಗಿದೆ. ಆ ಚಿತ್ರಗಳ ಬಗ್ಗೆ ನರ್ವಸ್ ಆಗಿದ್ದೀರಾ ಎಂದರೆ, ಖಂಡಿತಾ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣ, ಚಿತ್ರ ಗೆಲ್ಲುತ್ತವೆ ಎಂಬ ಆತ್ಮವಿಶ್ವಾಸ.
ಈ ಕುರಿತು ಮಾತನಾಡುವ ಅವರು, ನಾನು ದುರಹಂಕಾರದಿಂದ ಮಾತನಾಡುತ್ತಿಲ್ಲ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆಯಿಂದಲೇ ಮಲಗುತ್ತಿದ್ದೇನೆ, ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆಯಿಂದಲೇ ಏಳುತ್ತಿದ್ದೇನೆ. ಅದೇ ಧೈರ್ಯದಿಂದ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ ಮತ್ತು 57ನೇ ವಯಸ್ಸಿನಲ್ಲೂ ರಿಸ್ಕಿ ಸ್ಟಂಟ್ಗಳನ್ನು ಮಾಡುತ್ತಿದ್ದೇನೆ. ನನಗೆ ನಂಬಿಕೆ ಇಲ್ಲದಿದ್ದರೆ, ಈ ಚಿತ್ರಗಳನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ ಎಂದು ಅವರು ಏಳಿದ್ದಾರೆ.
ಶಾರೂಖ್ ಖಾನ್ ತಮಗೆ ಚಿಕ್ಕಂದಿನಿಂದಲೂ ಇಂಥದ್ದೊಂದು ಆತ್ಮವಿಶ್ವಾಸ ಇತ್ತು ಎಂದು ಹೇಳಿಕೊಂಡಿದ್ದಾರೆ. ಗಣಿತ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದ್ದೆ ಅಂತಂದುಕೊಂಡಿದ್ದೆ. ಆದರೆ, 100ಕ್ಕೆ 3 ಅಂಕ ಬಂದಿತ್ತು. ಕೆಲವೊಮ್ಮೆ ಎಷ್ಟೇ ಆತ್ಮವಿಶ್ವಾಸವಿದ್ದರೂ ಅಂದುಕೊಂಡಿದ್ದು ಆಗುವುದಿಲ್ಲ. ನಾವು ಎಲ್ಲ ಚಿತ್ರಗಳಿಗೂ ಅದೇ ಶ್ರಮ ಹಾಕುತ್ತೇವೆ. ಕೆಲವೊಮ್ಮೆ ಅದು ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಆಗುತ್ತದೆ. ಇನ್ನೂ ಕೆಲವೊಮ್ಮೆ ಜೀರೋ ಆಗುತ್ತದೆ ಎಂದಿದ್ದಾರೆ.