

ರಾಮ ಮಂದಿರ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಶಂಕುಸ್ಥಾಪನೆಯಾಗಿದೆ. ಅಷ್ಟೇ ಅಲ್ಲ, ಇನ್ನು ಮುಂದೆ ಮಂದಿರ ನಿರ್ಮಾಣ ಕೆಲಸಗಳು ಭರದಿಂದ ಸಾಗಲಿದೆ. ಈಗಾಗಲೇ ಮಂದಿರ ನಿರ್ಮಾಣಕ್ಕೆ ಸಾಕಷ್ಟು ಜನ ದೇಣಿಗೆ ನೀಡಿದ್ದು, ಇನ್ನುಷ್ಟು ಜನ ತಮ್ಮ ಶಕ್ತಿಮೀರಿ ಧನ ಸಹಾಯ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.
ಈ ಮಧ್ಯೆ, ಬಾಲಿವುಡ್ನ ಸೂಪರ್ ಸ್ಟಾರ್ ಶಾರೂಖ್ ಖಾನ್ ಸಹ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ. ಇಷ್ಟಕ್ಕೂ ಶಾರೂಖ್ ಖಾನ್ ಕೊಟ್ಟಿದ್ದಾರೆ ಎನ್ನುವ ಮೊತ್ತ ಎಷ್ಟು ಗೊತ್ತಾ? ಐದು ಕೋಟಿ ರೂಪಾಯಿಗಳು.
ಹೌದು, ರಾಮ ಮಂದಿರ ನಿರ್ಮಾಣಕ್ಕೆ ಶಾರೂಖ್ ಖಾನ್ ಅವರು ಐದು ಕೋಟಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿಯೊಂದು ಕಳೆದೊಂದು ದಿನದಿಂದ ಕೇಳಿ ಬಂದಿದ್ದು, ಈ ಸುದ್ದಿ ಎಲ್ಲಿಂದ ಮತ್ತು ಹೇಗೆ ಶುರುವಾಯಿತು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ.
ಇಷ್ಟಕ್ಕೂ ಶಾರೂಖ್ ಖಾನ್, ರಾಮ ಮಂದಿರ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿಗಳನ್ನು ಕೊಟ್ಟಿದ್ದು ನಿಜವಾ? ಖಂಡಿತಾ ಇಲ್ಲ ಎನ್ನಲಾಗುತ್ತಿದೆ. ರೆಡ್ ಚಿಲ್ಲೀಸ್ನ ಹಿರಿಯ ಮ್ಯಾನೇಜರ್ ಒಬ್ಬರು ಹೇಳಿರುವಂತೆ ಇದೊಂದು ದೊಡ್ಡ ಗಾಸಿಪ್ ಆಗಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲವಂತೆ.
ಇದಕ್ಕೂ ಮುನ್ನ, ಶಾರೂಖ್ ಖಾನ್ ಅವರ ಮನ್ನತ್ ಮನೆಯನ್ನು ಪ್ಲಾಸ್ಟಿಕ್ ಶೀಟ್ಗಳಿಂದ ಮುಚ್ಚಲಾಗಿತ್ತು. ಕೊರೊನಾ ವೈರಸ್ ಸೋಂಕು ಹಬ್ಬುವುದನ್ನು ತಡೆಯುವುದಕ್ಕೆ ಹೀಗೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಅಂತಿಮವಾಗಿ, ಇದು ಸುಳ್ಳು ಸುದ್ದಿ ಎಂದು ಶಾರೂಖ್ ಅವರ ಪ್ರಚಾರ ತಂಡ ತಳಿಸಿದ್ದು, ಮಳೆಯಿಂದ ಮನೆಗೆ ಆಗುವ ಹಾನಿಯನ್ನು ತಡೆಯುವುದಕ್ಕೆ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಅದಾಗಿ ಕೆಲವೇ ದಿನಗಳ ಅಂತರದಲ್ಲಿ ಶಾರೂಖ್ ಕುರಿತು ಇನ್ನೊಂದು ಸುಳ್ಸುದ್ದಿ ಹಬ್ಬಿದೆ. ಅದ್ಯಾರು ಈ ರೀತಿ ಮಾಡುತ್ತಿದ್ದಾರೆ ಮತ್ತು ಎಲ್ಲಿಂದ ಇಂಥದ್ದೊಂದು ಸುದ್ದಿ ಶುರುವಾಯಿತು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.