

ಮುಂಬೈ: ಲಾಕ್ಡೌನ್ ಬೆನ್ನಲ್ಲೆ ಸಿನಿಮಾ ಇಂಡಸ್ಟ್ರಿ ಸೇರಿ ಪಿಎಂ ಫಂಡ್, ಮಹಾರಾಷ್ಟ್ರ ಸರ್ಕಾರದ ಪರಿಹಾರ ನಿಧಿಗೆ ಕೋಟಿಗಟ್ಟಲೇ ದೇಣಿಗೆ ನೀಡಿದ್ದ ಬಾಲಿವುಡ್ ಬಾದ್ಶಾ, ಇತ್ತೀಚೆಗಷ್ಟೇ ಭವ್ಯವಾದ ಬಹುಮಹಡಿ ಕಟ್ಟಡವನ್ನು ಐಸೋಲೇಷನ್ಗೆ ಬಳಸಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕೋರಿದ್ದರು. ಇದೀಗ ಮತ್ತೊಂದು ವಿಚಾರಕ್ಕೆ ಶಾರುಖ್ ಸುದ್ದಿಯಲ್ಲಿದ್ದಾರೆ. ಹೌದು, ಕರೊನಾ ಮಾರಿ ಜತೆ ಹೋರಾಡುತ್ತಿರುವ ವೈದ್ಯರುಗಳ ನೆರವಿಗೆ ಶಾರುಖ್ ಧಾವಿಸಿದ್ದಾರೆ. ಬರೋಬ್ಬರಿ 25ಸಾವಿರ ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್) ಕಿಟ್ ವಿತರಿಸಿದ್ದಾರೆ. ವಿಶೇಷ ಏನೆಂದರೆ ಹಾಗೆ ಕೊಟ್ಟ ಕಿಟ್ ಬಗ್ಗೆ ಶಾರುಖ್ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಬದಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ರಾಜೇಶ್ ತೋಪೆ ಟ್ವಿಟರ್ ಮೂಲಕ ಶಾರುಖ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದಕ್ಕೆ ಅಷ್ಟೇ ಮಿನಮ್ರತೆಯಿಂದ ನಿಮ್ಮ ಜತೆ ನಾವಿದ್ದೇವೆ ಎಂದು ಉತ್ತರಿಸಿದ್ದಾರೆ. (ಏಜೆನ್ಸೀಸ್)